ರೋಗಿಗಳ ಸಿಸಿಟಿವಿ ವೀಡಿಯೊಗಳ ಆನ್ಲೈನ್ ಮಾರಾಟಜಾಲ ಬಯಲಿಗೆ: 7 ಮಂದಿಯ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಅಹ್ಮದಾಬಾದ್: ಆಸ್ಪತ್ರೆಯ ಸಿಸಿಟಿವಿ ನೆಟ್ವರ್ಕ್ ಹ್ಯಾಕ್ ಮಾಡಿ, ಅವುಗಳಿಂದ ಮಹಿಳಾ ರೋಗಿಗಳ ವೀಡಿಯೊಗಳನ್ನು ಸಂಗ್ರಹಿಸಿ, ಆನ್ಲೈನ್ನಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಗುಜರಾತ್ನ ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ಭೇದಿಸಿದ್ದಾರೆ.
ದಿಲ್ಲಿಯ ರೋಹಿತ್ ಸಿಸೋಡಿಯಾ ಎಂಬಾತನನ್ನು ಬುಧವಾರ ಬಂಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ ಏಳಕ್ಕೇರಿದೆ. ಬಂಧಿತ ಆರೋಪಿ ಸಿಸೋಡಿಯಾ ಸಿಸಿಟಿವಿ ವೀಡಿಯೊಗಳನ್ನು ಹ್ಯಾಕ್ ಮಾಡಿ, ಅವುಗಳನ್ನು ಸಹಆರೋಪಿಗಳಿಗೆ ಮಾರಾಟ ಮಾಡುತ್ತಿದ್ದ. ಅವರು ಈ ವೀಡಿಯೊಗಳನ್ನು ಯೂಟ್ಯೂಬ್ ಹಾಗೂ ಟೆಲಿಗ್ರಾಂ ಚಾನಲ್ಗಳೊಂದಿಗೆ ಹಂಚಿಕೊಳ್ಳುತ್ತಿದ್ದರೆಂದು ಅಹ್ಮದಾಬಾದ್ನ ಸೈಬರ್ ಕ್ರೈಂ ಬಾಂಚ್ ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯೊಂದರ ಹೆರಿಗೆ ಕೋಣೆಯ ಒಳಗಡೆ ಮಹಿಳಾ ರೋಗಿಗಳನ್ನು ಪರೀಕ್ಷೆ ನಡೆಸುತ್ತಿರುವ ವೀಡಿಯೋ ದೃಶ್ಯಗಳು ಯೂಟ್ಯೂಬ್ನ ಕೆಲವು ಚಂದಾ (ಸಬ್ಸ್ಕ್ರಿಪ್ಶನ್)ಕಡ್ಡಾಯವಾಗಿರುವ ಕೆಲವು ಯೂಟ್ಯೂಬ್ ಹಾಗೂ ಟೆಲಿಗ್ರಾಂ ವಾಹಿನಿಗಳಲ್ಲಿ ಪ್ರಸಾರವಾದ ಬಳಿ ಕ್ರೈಂ ಬ್ರಾಂಚ್ ಪೊಲೀಸರು ಫೆಬ್ರವರಿ 17ರಂದು ಪ್ರಕರಣ ದಾಖಲಿಸಿದ್ದರು.
ಬಂಧಿತರಾದ ಏಳು ಮಂದಿ ಸೂರತ್ನ ಪರಿತ್ ಧಮೇಲಿಯಾ ಎಂಬ ಹ್ಯಾಕರ್ ಹಾಗೂ ಯೂಟ್ಯೂಬ್ ವಾಹಿನಿಯ ಮಾಲಕ, ಮಹಾರಾಷ್ಟ್ರದ ಲಾಥೂರ್ ನಿವಾಸಿ ಪ್ರಜ್ವಲ್ ಥೈಲಿ ಅವರು ಕೂಡಾ ಸೇರಿದ್ದಾರೆ.
ಆರೋಪಿ ಸಿಸೋಡಿಯಾ ವೀಡಿಯೊ ಕ್ಲಿಪ್ಪಿಂಗ್ಗಳನ್ನು ಕ್ಯೂಆರ್ ಕೋಡ್ ಆಗಿ ಪರಿವರ್ತಿಸಿದ ಬಳಿಕ ಅವುಗಳು ತೈಲಿ ಮತ್ತಿತರರಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಈ ವೀಡಿಯೊ ತುಣುಕುಗಳ ಪೈಕಿ ಕೆಲವನ್ನು ಥೈಲಿಯ ಒಡೆತನದ ವಾಹಿನಿ ಸೇರಿದಂತೆ ಮೂರು ಯೂಟ್ಯೂಬ್ ಚಾನೆಲ್ಗಳಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಇವುಗಳ ಲಿಂಕ್ ಅನ್ನು ಟೆಲಿಗ್ರಾಂ ಗ್ರೂಪ್ಗೆ ನೀಡಲಾಗುತ್ತಿತ್ತು.
ಟೆಲಿಗ್ರಾಂ ಗ್ರೂಪ್ನ ಸದಸ್ಯರು ಪ್ರತಿ ವೀಡಿಯೊ ವೀಕ್ಷಣೆಗೆ 2 ಸಾವಿರ ರೂ. ಶುಲ್ಕವನ್ನು ವಿಧಿಸಲಾಗುತ್ತಿತ್ತು ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ.







