ಆಪರೇಷನ್ ಸಿಂಧೂರ್ | ಭಾರತವು ಪಾಕಿಸ್ತಾನದ ಡ್ರೋನ್ ಗಳನ್ನು ನಿಷ್ಕ್ರಿಯಗೊಳಿಸಿದ್ದು ಹೇಗೆ?: ಕಾರ್ಯಾಚರಣೆಯ ಬಗ್ಗೆ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಹೇಳಿಕೆ

ಸಿಡಿಎಸ್ ಜನರಲ್ ಅನಿಲ್ ಚೌಹಾಣ್ | Photo: PTI
ಹೊಸದಿಲ್ಲಿ: ಪಹಲ್ಗಾಮ್ ದಾಳಿಯ ಬೆನ್ನಿಗೇ ಭಾರತ ಮತ್ತು ಪಾಕಿಸ್ತಾನಗಳ ಸ್ಫೋಟಗೊಂಡ ಸಂಘರ್ಷದ ವೇಳೆ, ಪಾಕಿಸ್ತಾನ ಶಸ್ತ್ರಾಸ್ತ್ರ ರಹಿತ ಡ್ರೋನ್ ಮತ್ತು ಹಾರಾಡುವ ಯುದ್ಧ ಸಾಮಗ್ರಿಗಳೆರಡನ್ನು ಬಳಸಿತ್ತು. ಆದರೆ, ಭಾರತೀಯ ಸೇನೆಯು ಚಲನಶೀಲ ಹಾಗೂ ಚಲನರಹಿತ ಯುದ್ಧ ಸಾಮಗ್ರಿಗಳನ್ನು ಬಳಸುವ ಮೂಲಕ, ಅಂತಹ ಬಹುತೇಕ ಡ್ರೋನ್ ಗಳನ್ನು ನಿಷ್ಕ್ರಿಯಗೊಳಿಸಿತು. ಈ ವೇಳೆ ಕೆಲವು ಡ್ರೋನ್ ಗಳು ಬಹುತೇಕ ಯಾವುದೇ ಹಾನಿಗೀಡಾಗದೆ ಚೇತರಿಸಿಕೊಂಡವು ಎಂದು ಬುಧವಾರ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ಭಾರತೀಯ ಸೇನೆಯ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಹೊಸ ಸಂಗತಿಗಳನ್ನು ಬಯಲುಗೊಳಿಸಿದರು.
ದಿಲ್ಲಿಯಲ್ಲಿ ಆಯೋಜನೆಗೊಂಡಿದ್ದ ರಕ್ಷಣಾ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, “ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ, ಮೇ 10ರಂದು ಪಾಕಿಸ್ತಾನ ಸೇನೆಯು ಶಸ್ತ್ರಾಸ್ತ್ರ ರಹಿತ ಡ್ರೋನ್ ಹಾಗೂ ಹಾರಾಡುವ ಯುದ್ಧ ಸಾಮಗ್ರಿಗಳೆರಡನ್ನೂ ಬಳಸಿತ್ತು. ಆದರೆ, ಆ ಯಾವುವೂ ಭಾರತೀಯ ಸೇನೆಗಾಗಲಿ ಅಥವಾ ನಾಗರಿಕ ಮೂಲಸೌಕರ್ಯಗಳಿಗಾಗಲಿ ಯಾವುದೇ ಹಾನಿಯನ್ನೆಸಗಲಿಲ್ಲ. ಬಹುತೇಕ ಡ್ರೋನ್ ಗಳನ್ನು ಚಲನಶೀಲ ಹಾಗೂ ಚಲನರಹಿತ ಯುದ್ಧ ಮಾದರಿಯ ಮೂಲಕ ನಿಷ್ಕ್ರಿಯಗೊಳಿಸಲಾಯಿತು. ಈ ಪೈಕಿ ಕೆಲವು ಡ್ರೋನ್ ಗಳು ಬಹುತೇಕ ಯಾವುದೇ ಹಾನಿಯಿಲ್ಲದೆ ಚೇತರಿಸಿಕೊಂಡವು” ಎಂದು ತಿಳಿಸಿದರು.
ಇದೇ ವೇಳೆ ಮಾನವ ರಹಿತ ವಿಮಾನಗಳ ವ್ಯೂಹಾತ್ಮಕ ಬಳಕೆ ಹಾಗೂ ಸ್ವದೇಶಿ ಡ್ರೋನ್ ನಿರೋಧಕ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸುವ ಕುರಿತೂ ಚೌಹಾಣ್ ಪ್ರತಿಪಾದಿಸಿದರು.
“ನಾವು ಡ್ರೋನ್ ಕುರಿತು ಮಾತನಾಡುವಾಗ, ಈ ಡ್ರೋನ್ ಗಳು ಯುದ್ಧಗಳಲ್ಲಿ ವಿಕಸನಾತ್ಮಕ ಬದಲಾವಣೆ ತರುತ್ತಿವೆಯೋ ಅಥವಾ ಕ್ರಾಂತಿಕಾರಿ ಬದಲಾವಣೆ ತರುತ್ತಿವೆಯೋ ಎಂದು ಯೋಚಿಸುತ್ತೇವೆ. ನನ್ನ ಪ್ರಕಾರ, ಅವುಗಳ ಅಭಿವೃದ್ಧಿ ವಿಕಸನಾತ್ಮಕವಾಗಿದ್ದು, ಅವುಗಳನ್ನು ಯುದ್ಧಗಳಲ್ಲಿ ನಿಯೋಜಿಸುವುದು ಕ್ರಾಂತಿಕಾರಿಯಾಗಿದೆ” ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಪಹಲ್ಗಾಮ್ ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ನಡೆಸಿ, ಹಲವರನ್ನು ಹತ್ಯೆಗೈದ ಬೆನ್ನಿಗೇ, ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿ, 10ಕ್ಕೂ ಹೆಚ್ಚು ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿತ್ತು.







