ಕದನ ವಿರಾಮವನ್ನು ಮೊದಲು ಪ್ರಕಟಿಸಿದ್ದು ಅಮೆರಿಕದ ಅಧ್ಯಕ್ಷರು: ಪ್ರಧಾನಿ ಮೋದಿಗೆ ಪತ್ರ ಬರೆದ ರಾಹುಲ್

Photos : PTI
ಹೊಸದಿಲ್ಲಿ: ಕೇಂದ್ರವು ಶನಿವಾರ ಪಾಕಿಸ್ತಾನದೊಂದಿಗೆ ಕದನ ವಿರಾಮವನ್ನು ಪ್ರಕಟಿಸಿದ ಬೆನ್ನಿಗೇ ರವಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿರುವ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಆಪರೇಷನ್ ಸಿಂಧೂರ ಮತ್ತು ಕದನ ವಿರಾಮ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವಂತೆ ವಿನಂತಿಸಿಕೊಂಡಿದ್ದಾರೆ. ಕದನ ವಿರಾಮವನ್ನು ಮೊದಲು ಪ್ರಕಟಿಸಿದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
‘ಪ್ರಿಯ ಪ್ರಧಾನಿಯವರೇ,ಸಂಸತ್ತಿನ ವಿಶೇಷ ಅಧಿವೇಶನವನ್ನು ತಕ್ಷಣ ಕರೆಯಬೇಕೆಂಬ ಪ್ರತಿಪಕ್ಷದ ಸರ್ವಾನುಮತದ ವಿನಂತಿಯನ್ನು ನಾನು ಪುನರುಚ್ಚರಿಸುತ್ತಿದ್ದೇನೆ. ಪಹಲ್ಗಾಮ್ ಭಯೋತ್ಪಾದಕ ದಾಳಿ,ಆಪರೇಷನ್ ಸಿಂಧೂರ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊದಲು ಪ್ರಕಟಿಸಿದ ಕದನ ವಿರಾಮದ ಕುರಿತು ಚರ್ಚೆಯು ಜನರಿಗೆ ಮತ್ತು ಅವರ ಪ್ರತಿನಿಧಿಗಳಿಗೆ ಮಹತ್ವದ್ದಾಗಿದೆ. ಇದು ಮುಂಬರುವ ಸವಾಲುಗಳನ್ನು ಎದುರಿಸಲು ನಮ್ಮ ಸಾಮೂಹಿಕ ಸಂಕಲ್ಪವನ್ನು ಪ್ರದರ್ಶಿಸಲು ಒಂದು ಅವಕಾಶವೂ ಆಗಲಿದೆ. ಈ ಬೇಡಿಕೆಯನ್ನು ನೀವು ಗಂಭೀರವಾಗಿ ಮತ್ತು ತ್ವರಿತವಾಗಿ ಪರಿಗಣಿಸುತ್ತೀರಿ ಎಂದು ನಾನು ನಂಬಿದ್ದೇನೆ’ ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಬರೆದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಪ್ರಧಾನಿಯವರಿಗೆ ಪತ್ರವನ್ನು ಬರೆದಿದ್ದು,ಪಹಲ್ಗಾಮ್ನಲ್ಲಿ ನಡೆದ ಅಮಾನವೀಯ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕನಾಗಿ ನಾನು ಮತ್ತು ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿಯವರು ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯುವಂತೆ ನಮ್ಮ ಎ.28ರ ಪತ್ರದಲ್ಲಿ ನಿಮ್ಮನ್ನು ಕೋರಿಕೊಂಡಿದ್ದನ್ನು ನೀವು ನೆನಪಿಸಿಕೊಳ್ಳಬಹುದು. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಸತ್ತಿನ ವಿಶೇಷ ಅಧಿವೇಶನಕ್ಕಾಗಿ ಎಲ್ಲ ಪ್ರತಿಪಕ್ಷಗಳ ಸರ್ವಾನುಮತದ ವಿನಂತಿಯನ್ನು ಲೋಕಸಭೆಯಲ್ಲಿ ವಿಪಕ್ಷ ನಾಯಕರು ಮತ್ತೊಮ್ಮೆ ನಿಮ್ಮ ಗಮನಕ್ಕೆ ತಂದಿದ್ದಾರೆ. ರಾಜ್ಯಸಭೆಯಲ್ಲಿ ವಿಪಕ್ಷ ನಾಯಕನಾಗಿ ನಾನು ಅವರನ್ನು ಬೆಂಬಲಿಸಿ ಈ ಪತ್ರವನ್ನು ಬರೆಯುತ್ತಿದ್ದೇನೆ. ನೀವು ನಮ್ಮ ಮನವಿಯನ್ನು ಪುರಸ್ಕರಿಸುತ್ತೀರೆಂಬ ವಿಶ್ವಾಸವಿದೆ ’ಎಂದು ತಿಳಿಸಿದ್ದಾರೆ.







