ಸಾಮಾಜಿಕ ಮಾಧ್ಯಮ ವೇದಿಕೆಗಳಿಗೇಕೆ ಸುಳ್ಳು ಸುದ್ದಿಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ: ಸಿಇಸಿ ರಾಜೀವ್ ಕುಮಾರ್ ಪ್ರಶ್ನೆ

ರಾಜೀವ್ ಕುಮಾರ್ | PC : PTI
ಹೊಸದಿಲ್ಲಿ: ಸಾಮಾಜಿಕ ಮಾಧ್ಯಮ ವೇದಿಕೆಗಳಿಗೇಕೆ ಸುಳ್ಳು ಸುದ್ದಿಗಳನ್ನು ನಿರ್ಬಂಧಿಸಲು ಅಥವಾ ಕನಿಷ್ಠ ಪಕ್ಷ ಹಣೆಪಟ್ಟಿ ಹಚ್ಚಲು ಸಾಧ್ಯವಿಲ್ಲ ಹಾಗೂ ಚುನಾವಣಾ ಆಯೋಗಗಳು ಅವರನ್ನು ರಕ್ಷಿಸಲು ಸತ್ಯಶೋಧಕರನ್ನು ನೇಮಿಸಲು ಅವಕಾಶ ನೀಡುತ್ತಿಲ್ಲ ಎಂದು ಶುಕ್ರವಾರ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಖೇದ ವ್ಯಕ್ತಪಡಿಸಿದ್ದಾರೆ.
“ಇಲ್ಲಿ ವ್ಯಾವಹಾರಿಕ ಹಿತಾಸಕ್ತಿ ಕೆಲಸ ಮಾಡುತ್ತಿರುವಂತಿದೆ. ಇದು ಮೊದಲಿಗೆ ರೋಗವನ್ನು ಹರಡಿ, ನಂತರ ಔಷಧವನ್ನು ಮಾರಾಟ ಮಾಡಿದಂತೆ. ಇದರಿಂದ ಸಂತ್ರಸ್ತನಾಗುವುದು ನ್ಯಾಯಯುತ ಚುನಾವಣಾ ಪ್ರಕ್ರಿಯೆ ಹಾಗೂ ಪ್ರಜಾತಂತ್ರದ ಪರಿಶುದ್ಧತೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಚುನಾವಣಾ ನಿರ್ವಹಣಾ ಸಂಸ್ಥೆಗಳ ಕುರಿತು ಇಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವಿಚಾರ ಗೋಷ್ಠಿಯನ್ನುದ್ದೇಶಿಸಿ ಭಾಷಣ ಮಾಡಿದ ರಾಜೀವ್ ಕುಮಾರ್, ತೀರಾ ತಡವಾಗುವುದಕ್ಕೂ ಮುನ್ನ ಸಾಮಾಜಿಕ ಮಾಧ್ಯಮ ಕಂಪೆನಿಗಳು ತಮ್ಮ ಆತ್ಮನಿರೀಕ್ಷೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
“ಯಾರ ದನಿಯನ್ನು ಕೇಳಲಾಗಿಲ್ಲವೊ, ಯಾವ ದನಿಗಳು ನಕಲಿಯಾಗಿಲ್ಲವೊ, ಪರಿಶೀಲನೆಗೊಳಗಾಗದ ಮತ್ತು ತಪ್ಪು ದಾರಿಗೆಳೆಯುವಂತಹ ನಿರೂಪಣೆಯನ್ನು ಹೊಂದಿಲ್ಲವೊ ಹಾಗೂ ವಿನ್ಯಾಸದಲ್ಲಿ ವಿರೂಪಗೊಂಡಿಲ್ಲವೊ ಅಂತಹ ವಾಕ್ ಸ್ವಾತಂತ್ರ್ಯಕ್ಕೆ ಸ್ಥಳಾವಕಾಶ ಒದಗಿಸುವಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಪ್ರಧಾನ ಸಾಧನವಾಗಲಿ” ಎಂದು ಅವರು ಕಿವಿಮಾತು ಹೇಳಿದರು.







