ತನ್ನ 80ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳಲು ಸ್ಕೈಡೈವ್ ಮಾಡಿದ ಭಾರತೀಯ ಸೇನೆಯ ಮಾಜಿ ಯೋಧನ 80 ವರ್ಷದ ತಾಯಿ!

PC : Instagram/Brigadier Saurabh Singh Shekhawat
ಹೊಸದಿಲ್ಲಿ: 80 ವರ್ಷದ ವಯೋವೃದ್ಧ ಮಹಿಳೆಯೊಬ್ಬರು ತಮ್ಮ ಜನ್ಮದಿನಾಚರಣೆಯನ್ನು ವಿನೂತನವಾಗಿ ಆಚರಿಸಿಕೊಳ್ಳುತವ ಮೂಲಕ, ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಭಾರತೀಯ ಸೇನೆಯ ಮಾಜಿ ಯೋಧರೊಬ್ಬರ ತಾಯಿಯಾದ ಡಾ. ಶ್ರದ್ಧಾ ಚೌಹಾಣ್ ಅವರು 20-30ರ ಹರೆಯದ ಯುವತಿಯರೂ ನಾಚಿಕೊಳ್ಳುವಂತೆ ಸುಮಾರು 10,000 ಅಡಿ ಎತ್ತರದಿಂದ ಸ್ಕೈಡೈವ್ ಅನ್ನು ಯಶಸ್ವಿಯಾಗಿ ಮಾಡಿ, ಹರ್ಷೋದ್ಗಾರಕ್ಕೆ ಕಾರಣರಾಗಿದ್ದಾರೆ.
ನಿವೃತ್ತ ಬ್ರಿಗೇಡಿಯರ್ ಆದ ಸೌರಭ್ ಸಿಂಗ್ ಶೆಖಾವತ್ ಅವರ ತಾಯಿಯಾದ ಡಾ. ಶ್ರದ್ಧಾ ಚೌಹಾಣ್, ತಮ್ಮ 80ನೇ ಜನ್ಮದಿನಾಚರಣೆಯನ್ನು ಸ್ಮರಣೀಯವಾಗಿಸಿಕೊಳ್ಳಲು 10,000 ಅಡಿ ಎತ್ತರದಿಂದ ಸ್ಕೈಡೈವ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ತಾಯಿಯ ಬಯಕೆಗೆ ಒತ್ತಾಸೆಯಾಗಿ ನಿಂತಿರುವ ಅವರ ಪುತ್ರ ಬ್ರಿಗೇಡಿಯರ್ ಸೌರಭ್ ಸಿಂಗ್ ಶೆಖಾವತ್, ಆಕೆಯ ಅಸಾಧಾರಣ ಸಾಹಸ ಯಶಸ್ವಿಯಾಗಲು ಬೆನ್ನಿಗೆ ನಿಂತಿದ್ದಾರೆ.
ಡಾ. ಶ್ರದ್ಧಾ ಚೌಹಾಣ್ ಅವರು 10,000 ಅಡಿ ಎತ್ತರದಿಂದ ಸ್ಕೈಡೈವಿಂಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅವರು ಚಟುವಟಿಕೆಯ ವೀಡಿಯೊವನ್ನು ಅವರ ಪುತ್ರ ಬ್ರಿಗೇಡಿಯರ್ ಸೌರಭ್ ಸಿಂಗ್ ಶೆಖಾವತ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ತಾಯಿ ಸ್ಕೈಡೈವ್ ಮಾಡಿದ ಭಾರತದ ಅತ್ಯಂತ ಹಿರಿಯ ಮಹಿಳೆಯಾಗಿದ್ದು, ಈ ಕ್ಷಣ ಮತ್ತಷ್ಟು ವಿಶೇಷವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಡಾ. ಶ್ರದ್ಧಾ ಚೌಹಾಣ್ ಅವರ ಯಶಸ್ವಿ ಸ್ಕೈಡೈವಿಂಗ್ ಕುರಿತು, “ಓರ್ವ ತಾಯಿ. ಒಂದು ಮೈಲಿಗಲ್ಲು. ಬಾನೆತ್ತರಕ್ಕೇರಿದ ಒಂದು ಕ್ಷಣ. ಶೌರ್ಯಕ್ಕೆ ಯಾವುದೇ ವಯಸ್ಸು ತಿಳಿದಿಲ್ಲ. ಪ್ರತಿಗೆ ಯಾವುದೇ ಎತ್ತರವಿಲ್ಲ” ಎಂದೂ ಅವರು ಭಾವನಾತ್ಮಕವಾಗಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿರಾರು ಬಳಕೆದಾರರ ಹೃದಯ ಗೆದ್ದಿದ್ದು, ಈವರೆಗೆ 18,000ಕ್ಕೂ ಹೆಚ್ಚು ಲೈಕ್ ಗಳನ್ನು ಗಿಟ್ಟಿಸಿಕೊಂಡಿದೆ. ಈ ವೀಡಿಯೊ ಕುರಿತು ಪ್ರತಿಕ್ರಿಯಿಸಿರುವ ಹಲವಾರು ಬಳಕೆದಾರರು ತಾಯಿ-ಮಗನ ಶೌರ್ಯ ಹಾಗೂ ಸ್ಫೂರ್ತಿದಾಯಕ ಚೈತನ್ಯವನ್ನು ಪ್ರಶಂಸಿಸಿದ್ದಾರೆ.







