ಕೆಲ ಸಿಮೆಂಟ್ ಕಾರ್ಖಾನೆಗಳಿಗೆ ಪರಿಸರ ಅನುಮೋದನೆ ಬೇಡ : ಪರಿಸರ ಸಚಿವಾಲಯ

ಸಾಂದರ್ಭಿಕ ಚಿತ್ರ | Credit : freepik.com
ಹೊಸದಿಲ್ಲಿ, ಅ. 2: ಕೇವಲ ಸಿಮೆಂಟ್ ಪುಡಿ ಮಾಡುವ (ಗ್ರೈಂಡಿಂಗ್) ಕಾರ್ಖಾನೆಗಳಿಗೆ ಮುಂಚಿತ ಪರಿಸರ ಅನುಮೋದನೆ ಪಡೆಯುವುದರಿಂದ ವಿನಾಯಿತಿ ನೀಡುವ ಪ್ರಸ್ತಾವವನ್ನು ಕೇಂದ್ರ ಪರಿಸರ ಸಚಿವಾಲಯ ಮುಂದಿಟ್ಟಿದೆ. ಈ ಕಾರ್ಖಾನೆಗಳು ವಿದ್ಯುತ್ ಸ್ಥಾವರಗಳನ್ನು ಹೊಂದಿರಬಾರದು ಹಾಗೂ ಕಚ್ಚಾವಸ್ತುಗಳು ಮತ್ತು ಸಿದ್ಧಗೊಂಡ ಉತ್ಪನ್ನಗಳನ್ನು ರೈಲ್ವೇ ಅಥವಾ ವಿದ್ಯುತ್ ಚಾಲಿತ ವಾಹನಗಳ ಮೂಲಕ ಸಾಗಿಸಬೇಕು ಎಂಬ ಷರತ್ತುಗಳನ್ನು ಮುಂದಿಡಲಾಗಿದೆ.
ಸಿಮೆಂಟ್ ಸ್ಥಾವರಗಳಿಗೆ ಹೋಲಿಸಿದರೆ, ಕ್ಯಾಲ್ಸಿನೇಶನ್ ಮತ್ತು ಕ್ಲಿಂಕರೈಸೇಶನ್ ಮಾಡದ ಹಾಗೂ ಕೇವಲ ಪುಡಿ ಮಾಡುವ ಸಿಮೆಂಟ್ ಕಾರ್ಖಾನೆಗಳು ಇಂಗಾಲದ ಡೈ ಆಕ್ಸೈಡನ್ನು ಕಡಿಮೆ ಪ್ರಮಾಣದಲ್ಲಿ ಹೊರಸೂಸುತ್ತವೆ. ಕಡಿಮೆ ತ್ಯಾಜ್ಯವನ್ನು ಉತ್ಪಾದಿಸುತ್ತವೆ ಮತ್ತು ಕಡಿಮೆ ಇಂಧನವನ್ನು ಉಪಯೋಗಿಸುತ್ತವೆ ಎಂದು ಸೆಪ್ಟಂಬರ್ 26ರಂದು ಕೇಂದ್ರ ಪರಿಸರ ಸಚಿವಾಲಯ ಹೊರಡಿಸಿದ ಕರಡು ಅಧಿಸೂಚನೆಯೊಂದು ಹೇಳಿದೆ. ಜೊತೆಗೆ, ಕಚ್ಚಾವಸ್ತುಗಳು ಮತ್ತು ಸಿದ್ಧಗೊಂಡ ಉತ್ಪನ್ನಗಳನ್ನು ರೈಲುಗಳು ಮತ್ತು ವಿದ್ಯುತ್ ಚಾಲಿತ ವಾಹನಗಳ ಮೂಲಕ ಸಾಗಿಸುವುದರಿಂದ ಮಾಲಿನ್ಯ ಹೊರಸೂಸುವ ಪ್ರಮಾಣ ಮತ್ತಷ್ಟು ಕಡಿಮೆಯಾಗುತ್ತದೆ ಎಂದು ಅದು ಹೇಳಿದೆ. ಇಂಥ ಯೋಜನೆಗಳಿಗೆ ಸಾರ್ವಜನಿಕ ಸಮಾಲೋಚನೆ ಮತ್ತು ವಿವರವಾಗಿ ಇಐಎ ವರದಿಯ ಅಗತ್ಯವಿಲ್ಲ.
ಇವುಗಳ ಹೊರತಾಗಿಯೂ, ಇಂಥ ಕಾರ್ಖಾನೆಗಳನ್ನು ಅದೇ ನಿಯಂತ್ರಣ ಮತ್ತು ಮೇಲ್ವಿಚಾರಣೆ ವ್ಯವಸ್ಥೆಯಡಿ ತರಲಾಗಿದೆ. ಇದು ಅತಿರೇಕದ ಬದ್ಧತೆಗಳಾಗಿವೆ ಎಂದು ಸರಕಾರಿ ಅಧಿಸೂಚನೆ ಅಭಿಪ್ರಾಯಪಟ್ಟಿದೆ.





