ಜನಗಣತಿ 2027: ಕೇಂದ್ರದಿಂದ ಅಧಿಸೂಚನೆ
2 ಹಂತಗಳಲ್ಲಿ ನಡೆಯಲಿದೆ ಗಣತಿ

ಸಾಂದರ್ಭಿಕ ಚಿತ್ರ (credit: moneycontrol.com)
ಹೊಸದಿಲ್ಲಿ : 2027ರ ಜನಗಣತಿಯ ಕುರಿತು ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಎರಡು ಹಂತಗಳಲ್ಲಿ ನಡೆಯುವ ಜನಗಣತಿಯು ಹಿಮಚ್ಚಾದಿತ ಪ್ರದೇಶವಾದ ಲಡಾಕ್ ನಲ್ಲಿ ಅಕ್ಟೋಬರ್ ಒಂದು 2026 ರಿಂದ ಪ್ರಾರಂಭವಾಗಲಿದೆ. ಉಳಿದೆಡೆ ಮಾರ್ಚ್ 1, 2027ರಿಂದ ದೇಶದ ಜನರ ಸಂಖ್ಯೆ ಅಳೆಯುವ ಜನಗಣತಿಗೆ ಚಾಲನೆ ದೊರೆಯಲಿದೆ..
2011 ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದ 16 ವರ್ಷಗಳ ನಂತರ, 2027 ರಲ್ಲಿ ಜಾತಿ ಗಣತಿಯೊಂದಿಗೆ ಭಾರತದ 16 ನೇ ಜನಗಣತಿಯನ್ನು ನಡೆಸಲು ಸರ್ಕಾರ ಸೋಮವಾರ ಜೂನ್ 16, 2025ರಂದು ಅಧಿಸೂಚನೆಯನ್ನು ಹೊರಡಿಸಿದೆ.
ದೇಶಾದ್ಯಂತ ಜನಸಂಖ್ಯೆಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ನೀಡುವ ಬೃಹತ್ ಕಾರ್ಯವನ್ನು ಸುಮಾರು 34 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು ಮತ್ತು ಡಿಜಿಟಲ್ ಸಾಧನಗಳನ್ನು ಹೊಂದಿರುವ ಸುಮಾರು 1.3 ಲಕ್ಷ ಜನಗಣತಿ ಕಾರ್ಯಕಾರಿಗಳು ಮಾಡಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರವಿವಾರ ಕೇಂದ್ರ ಗೃಹ ಕಾರ್ಯದರ್ಶಿ, ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಜನಗಣತಿಯ ಸಿದ್ಧತೆಗಳನ್ನು ಪರಿಶೀಲಿಸಿದ್ದರು.
ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು - ಮನೆ ಪಟ್ಟಿ ಕಾರ್ಯಾಚರಣೆ (HLO), ಮೊದಲ ಹಂತದಲ್ಲಿ ನಡೆಯಲಿದೆ. ಇದರಲ್ಲಿ ಪ್ರತಿ ಮನೆಯ ವಸತಿ ಪರಿಸ್ಥಿತಿಗಳು, ಆಸ್ತಿಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ. ಇನ್ನೊಂದು ಹಂತದಲ್ಲಿ ಪ್ರತಿ ಮನೆಯ ಪ್ರತಿಯೊಬ್ಬರ ಆರ್ಥಿಕ, ಸಾಂಸ್ಕೃತಿಕ ಮತ್ತು ಇತರ ವಿವರಗಳನ್ನು ಸಂಗ್ರಹಿಸುವ ಜನಸಂಖ್ಯಾ ಗಣತಿ (PE) ನಡೆಯಲಿದೆ. ಜನಗಣತಿಯಲ್ಲಿ, ಜಾತಿ ಗಣತಿಯನ್ನು ಸಹ ಮಾಡಲಾಗುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಜನಗಣತಿ ಸಮಯದಲ್ಲಿ ದತ್ತಾಂಶ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಹಳ ಕಠಿಣ ದತ್ತಾಂಶ ಭದ್ರತಾ ಕ್ರಮಗಳನ್ನು ಜಾರಿಯಲ್ಲಿಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.







