ಜನಗಣತಿಯ ಮೊದಲ ಹಂತ| ಎಪ್ರಿಲ್ನಿಂದ ಸೆಪ್ಟೆಂಬರ್ರವರೆಗೆ ಮನೆಗಣತಿ

Photo Credit: The Hindu
ಹೊಸದಿಲ್ಲಿ,ಜ.8: 2027ರಲ್ಲಿ ಭಾರತದ ಜನಗಣತಿಯನ್ನು ನಡೆಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಬುಧವಾರ ಇನ್ನೊಂದು ಹೆಜ್ಜೆಯನ್ನು ಇರಿಸಿದೆ. 2026ರ ಎಪ್ರಿಲ್ ಹಾಗೂ ಸೆಪ್ಟೆಂಬರ್ ನಡುವೆ ಮನೆಗಳ ಪಟ್ಟಿ ಮಾಡುವಿಕೆಗೆ ಚಾಲನೆ ನೀಡಲಿದ್ದು ತರುವಾಯ 2027ರಲ್ಲಿ ಜನಗಣತಿ ನಡೆಯಲಿದೆ.
ಕೇಂದ್ರ ಸರಕಾರವು ಬುಧವಾರ ಹೊರಡಿಸಿದ ಔಪಚಾರಿಕ ಅಧಿಸೂಚನೆಯ ಪ್ರಕಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಸರಕಾರಗಳು 2026ರ ಎಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ಮನೆಗಳ ಪಟ್ಟಿ ಮಾಡುವಿಕೆ ಹಾಗೂ ಮನೆಗಣತಿಯನ್ನು ನಡೆಸಲಿದೆ. ಇದು ಜನಗಣತಿಯ ಮೊದಲ ಹಂತವಾಗಿದ್ದು ಮನೆಗಳು ಹಾಗೂ ಮೂಲಭೂತ ಸೌಕರ್ಯಗಳ ದಾಖಲೀಕರಣ ನಡೆಯಲಿದೆ. ಎರಡನೇ ಹಂತದಲ್ಲಿ ಜನಗಣತಿ ನಡೆಯಲಿದೆ.
2025ರ ಜೂನ್ 16ರಂದು ಈ ಬಗ್ಗೆ ಕೇಂದ್ರ ಸರಕಾರವು ಗೆಝೆಟ್ನಲ್ಲಿ ಅಧಿಸೂಚನೆಯೊಂದನ್ನು ಹೊರಡಿಸಿದ್ದು, 2027ರ ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿರುವುದಾಗಿ ತಿಳಿಸಿದೆ.
ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಲಡಾಕ್ ಹಾಗೂ ಜಮ್ಮುಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ಹಿಮಚ್ಚಾದಿತ ಪ್ರದೇಶಗಳಲ್ಲಿ ಕೆಲವು ತಿಂಗಳುಗಳು ಮುಂಚಿತವಾಗಿ ಅಂದರೆ 2026ರ ಸೆಪ್ಟೆಂಬರ್ನಲ್ಲಿ ನಡೆಯಲಿದೆ.
ಎರಡನೇ ಹಂತದಲ್ಲಿ ಪ್ರತಿಯೊಂದು ಮನೆಯ ಪ್ರತಿಯೊಬ್ಬ ವ್ಯಕ್ತಿಯ ಜನಸಂಖ್ಯಾತ್ಮುಕ, ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಮತ್ತಿತರ ವಿವರಗಳನ್ನು ಕಲೆಹಾಕಲಾಗುವುದು.
2027ರ ಜನಗಣತಿಗಾಗಿ ಕೇಂದ್ರ ಸರಕಾರವು ಬಜೆಟ್ನಲ್ಲಿ 11,718 ಕೋಟಿ ರೂ. ಅನುದಾನಕ್ಕೆ ತನ್ನ ಅನುಮೋದನೆ ನೀಡಿದೆ. ಜನಗಣತಿಯನ್ನು ಈ ಹಿಂದೆ 2011ರಲ್ಲಿ ನಡೆಸಲಾಗಿತ್ತು.







