ಎಸ್ಸಿ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣಕ್ಕಾಗಿ ‘ಶ್ರೇಷ್ಠಾ’ಯೋಜನೆಗೆ ಕೇಂದ್ರದ ಚಾಲನೆ

ಸಾಂದರ್ಭಿಕ ಚಿತ್ರ PHOTO : PTI
ಹೊಸದಿಲ್ಲಿ: ದೇಶದಲ್ಲಿಯ ಪರಿಶಿಷ್ಟ ಜಾತಿಗಳ (ಎಸ್ಸಿ) ಶಿಕ್ಷಣ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಸೋಮವಾರ ‘ಉದ್ದೇಶಿತ ಪ್ರದೇಶಗಳಲ್ಲಿನ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ವಸತಿ ಶಿಕ್ಷಣ ಯೋಜನೆ ’ಗೆ ಸೋಮವಾರ ಚಾಲನೆ ನೀಡಿದೆ.
ಸರಕಾರದ ಅಭಿವೃದ್ಧಿ ಉಪಕ್ರಮಗಳ ವ್ಯಾಪ್ತಿಯ ವಿಸ್ತರಣೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗಳ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಸೇವಾ ಕೊರತೆಗಳನ್ನು ನೀಗಿಸುವುದು ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಎನ್ ಜಿ ಒಗಳು ನಡೆಸುತ್ತಿರುವ ಅನುದಾನಿತ ಸಂಸ್ಥೆಗಳು ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ವಸತಿ ಪ್ರೌಢಶಾಲೆಗಳ ಸಹಭಾಗಿತ್ವದೊಡನೆ ಈ ಗುರಿಯನ್ನು ಸಾಧಿಸಲು ಯೋಜನೆಯು ಉದ್ದೇಶಿಸಿದೆ.
ಎಸ್ಸಿ ವಿದ್ಯಾರ್ಥಿಗಳ ಭವಿಷ್ಯದ ಅವಕಾಶಗಳನ್ನು ಭದ್ರಗೊಳಿಸುವ ಜೊತೆಗೆ ಅವರ ಸಾಮಾಜಿಕ-ಆರ್ಥಿಕ ಏಳಿಗೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ಸೃಷ್ಟಿಸುವುದು ‘ಶ್ರೇಷ್ಠಾ’ದ ಪರಿಕಲ್ಪನೆಯಾಗಿದೆ ಎಂದು ಹೇಳಿಕೆಯು ತಿಳಿಸಿದೆ.
ಯೋಜನೆಯನ್ನು ಎರಡು ವಿಧಗಳಲ್ಲಿ ರೂಪಿಸಲಾಗಿದೆ.
ಮೊದಲನೆಯದು ‘ಶ್ರೇಷ್ಠಾ ಶಾಲೆಗಳು(ಸಿಬಿಎಸ್ಇ/ರಾಜ್ತ ಮಂಡಳಿಯೊಂದಿಗೆ ಸಂಯೋಜಿತ ಅತ್ಯುತ್ತಮ ಶಾಲೆಗಳು)’. ಈ ವಿಧದಡಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರ್ದಿಷ್ಟ ಸಂಖ್ಯೆಯ ಪ್ರತಿಭಾವಂತ ಎಸ್ಸಿ ವಿದ್ಯಾರ್ಥಿಗಳನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ‘ಶ್ರೇಷ್ಠಾಕ್ಕಾಗಿ ರಾಷ್ಟ್ರೀಯ ಪ್ರವೇಶ ಪರೀಕ್ಷೆ (ಎನ್ಇಟಿಎಸ್)’ಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಈ ವಿದ್ಯಾರ್ಥಿಗಳನ್ನು ಅವರು 12ನೇ ತರಗತಿಯವರೆಗೆ ತಮ್ಮ ಶಿಕ್ಷಣವನ್ನು ಪೂರೈಸಲು ಸಾಧ್ಯವಾಗುವಂತೆ ಸಿಬಿಎಸ್ಇ/ರಾಜ್ಯ ಮಂಡಳಿಯೊಂದಿಗೆ ಸಂಯೋಜಿತ ಅತ್ಯುತ್ತಮ ಶಾಲೆಗಳ 9 ಮತ್ತು 11ನೇ ತರಗತಿಗಳಿಗೆ ಸೇರಿಸಲಾಗುತ್ತದೆ. ಆಯ್ಕೆ ಪ್ರಕ್ರಿಯೆಯು ಕಳೆದ ಮೂರು ವರ್ಷಗಳಲ್ಲಿ ಶೇ.75ಕ್ಕೂ ಅಧಿಕ ಫಲಿತಾಂಶದೊಂದಿಗೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬಿಎಸ್ಇ ಆಧಾರಿತ ಖಾಸಗಿ ವಸತಿ ಶಾಲೆಗಳನ್ನು ಗುರುತಿಸುವುದನ್ನು ಒಳಗೊಂಡಿರುತ್ತದೆ.
ವಾರ್ಷಿಕ 2.5 ಲ.ರೂ.ವರೆಗೆ ಪೋಷಕರ ಆದಾಯವನ್ನು ಹೊಂದಿರುವ ಅಂದಾಜು 3,000 ಎಸ್ಸಿ ವಿದ್ಯಾರ್ಥಿಗಳನ್ನು ಅವರ ಅರ್ಹತೆಯ ಆಧಾರದಲ್ಲಿ ಪ್ರತಿವರ್ಷ ಆಯ್ಕೆ ಮಾಡಲಾಗುತ್ತದೆ.
ಯೋಜನೆಯು ಶಾಲಾ ಶುಲ್ಕಗಳು ಮತ್ತು ಹಾಸ್ಟೆಲ್ ಶುಲ್ಕಗಳು (ಮೆಸ್ ಸೇರಿದಂತೆ) ಒಳಗೊಂಡಂತೆ ಪ್ರತಿ ವಿದ್ಯಾರ್ಥಿಯ ಸಂಪೂರ್ಣ ಶುಲ್ಕಗಳನ್ನು ಭರಿಸುತ್ತದೆ. ಯೋಜನೆಯು ಆಯ್ದ ಶಾಲೆಗಳಲ್ಲಿ ಬ್ರಿಡ್ಜ್ ಕೋರ್ಸ್ ಸಂಯೋಜಿಸುತ್ತದೆ. ಸಚಿವಾಲಯವು ವಿದ್ಯಾರ್ಥಿಗಳ ಪ್ರಗತಿಯ ನಿಯಮಿತ ಮೇಲ್ವಿಚಾರಣೆಯನ್ನು ನಡೆಸುತ್ತದೆ.
ಎರಡನೆಯ ವಿಧದಲ್ಲಿ ಎನ್ಜಿಒಗಳು/ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತಿರುವ ಶಾಲೆಗಳು/ಹಾಸ್ಟೆಲ್ಗಳು ಒಳಗೊಂಡಿವೆ. ಈ ವಿಧವು ಈ ಸಂಸ್ಥೆಗಳು ನಡೆಸುವ ಶಾಲೆಗಳು ಮತ್ತು ಹಾಸ್ಟೆಲ್ಗಳಿಗೆ ನಿರ್ದಿಷ್ಟವಾಗಿ ಅನ್ವಯಿಸುತ್ತದೆ ಮತ್ತು 12ನೇ ತರಗತಿಯವರೆಗೆ ಶಿಕ್ಷಣವನ್ನು ಒದಗಿಸುತ್ತದೆ. ಈ ಶಾಲೆಗಳಲ್ಲಿ ಎಸ್ಸಿ ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕಗಳನ್ನು ಯೋಜನೆಯೇ ಭರಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.







