ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ ಕಳೆದ 6 ವರ್ಷಗಳಲ್ಲಿ ತಮಿಳುನಾಡಿನಲ್ಲಿ ತಪಾಸಣೆಗಳನ್ನು ನಡೆಸಿಲ್ಲ: ಆರೋಗ್ಯ ಸಚಿವ ಮಾ ಸುಬ್ರಮಣಿಯನ್

ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ (Photo: X)
ಚೆನ್ನೈ: ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಯ(ಸಿಡಿಎಸ್ಸಿಒ) ಅಧಿಕಾರಿಗಳು ಕಳೆದ ಆರು ವರ್ಷಗಳಲ್ಲಿ ರಾಜ್ಯದಲ್ಲಿ ತಪಾಸಣೆಗಳನ್ನು ನಡೆಸಿಲ್ಲ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಬೆಟ್ಟು ಮಾಡಿದ್ದಾರೆ.
ಕಳೆದೊಂದು ತಿಂಗಳಲ್ಲಿ ಸಂಭವಿಸಿರುವ 22 ಮಕ್ಕಳ ಸಾವುಗಳಿಗೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಶ್ರೀಸನ್ ಫಾರ್ಮಾಸ್ಯೂಟಿಕಲ್ಸ್ ತಯಾರಿಕೆಯ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವನೆ ಕಾರಣ ಎಂಬ ಆರೋಪಗಳ ನಡುವೆ ಸಚಿವರ ಹೇಳಿಕೆ ಹೊರಬಿದ್ದಿದೆ.
ತಮಿಳುನಾಡು ಸರಕಾರವು ಔಷಧಿ ತಪಾಸಣೆಗಳನ್ನು ಸಮರ್ಪಕವಾಗಿ ನಡೆಸುವಲ್ಲಿ ವಿಫಲಗೊಂಡಿದೆ ಎಂಬ ಆರೋಪ ಕೇಳಿಬಂದಿದೆ.
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಬ್ರಮಣ್ಯನ್,ಪ್ರತಿ ವರ್ಷ ಎಲ್ಲ ಔಷಧಿ ತಯಾರಿಕೆ ಘಟಕಗಳ ತಪಾಸಣೆಗಳನ್ನು ನಡೆಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಶ್ರೀಸನ್ ಫಾರ್ಮಾಸ್ಯೂಟಿಕಲ್ಸ್ನ ಔಷಧಿ ಉತ್ಪನ್ನಗಳ ಗುಣಮಟ್ಟ ಪರೀಕ್ಷೆಯನ್ನು ನಡೆಸುವಲ್ಲಿ ವೈಫಲ್ಯಕ್ಕಾಗಿ ರಾಜ್ಯದ ಇಬ್ಬರು ಡ್ರಗ್ಸ್ ಇನ್ಸ್ಪೆಕ್ಟರ್ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
‘ಸಿಡಿಎಸ್ಸಿಒದ ಕೇಂದ್ರ ಡ್ರಗ್ ಇನಸ್ಪೆಕ್ಟರ್ಗಳು ಪ್ರತಿ ಮೂರು ವರ್ಷಗಳಿಗೊಮ್ಮೆ ದೇಶಾದ್ಯಂತ ಎಲ್ಲ ಔಷಧಿ ತಯಾರಿಕೆ ಘಟಕಗಳ ತಪಾಸಣೆ ನಡೆಸುವುದು ಅಗತ್ಯವಾಗಿದೆ. ಆದಾಗ್ಯೂ ಕಳೆದ ಆರು ವರ್ಷಗಳಲ್ಲಿ ತಮಿಳುನಾಡಿನಲ್ಲಿ ತಪಾಸಣೆಗಳನ್ನು ನಡೆಸಲಾಗಿಲ್ಲ. ನಾವು ಹೇಗೆ ಹೊಣೆಯಾಗುತ್ತೇವೆ? ನಾವು ಈ ವಿಷಯವನ್ನು ಕೇಂದ್ರದೊಂದಿಗೆ ಪ್ರಸ್ತಾವಿಸಿದ್ದೇವೆ ’ ಎಂದರು.
ತಮಿಳುನಾಡಿನಲ್ಲಿ ತಪಾಸಣೆಗಳ ಗುರಿಯನ್ನು ಸಾಧಿಸುವಲ್ಲಿ ಮತ್ತು 2016 ಮತ್ತು 2021ರ ನಡುವೆ ಪ್ರತಿ ವರ್ಷ ರಾಜ್ಯದಿಂದ ಪಡೆದುಕೊಂಡ ಸ್ಯಾಂಪಲ್ಗಳಲ್ಲಿ ಶೇ.34ರಿಂದ ಶೇ.40ರಷ್ಟು ಕೊರತೆಯನ್ನು ಉಲ್ಲೇಖಿಸಿರುವ 2024ರ ಸಿಎಜಿ ವರದಿಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಸುಬ್ರಮಣಿಯನ್,ಆ ಸಮಯದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಎಐಎಡಿಎಂಕೆ ಈ ಕೊರತೆಗಳಿಗೆ ಉತ್ತರಿಸಬೇಕು ಎಂದು ಪ್ರತಿಕ್ರಿಯಿಸಿದರು.
ಕಲುಷಿತ ಕೆಮ್ಮಿನ ಸಿರಪ್ ಬಗ್ಗೆ ಮಧ್ಯಪ್ರದೇಶ ಸರಕಾರವು ಅ.1ರಂದು ಮಾಹಿತಿ ನೀಡಿದ ತಕ್ಷಣ ರಾಜ್ಯದ ಔಷಧಿ ನಿಯಂತ್ರಣ ಇಲಾಖೆಯು ತಪಾಸಣೆಯನ್ನು ನಡೆಸಿತ್ತು. ಪರೀಕ್ಷೆಯಲ್ಲಿ ಕೆಮ್ಮಿನ ಸಿರಪ್ನಲ್ಲಿ ಡೈಎಥಿಲೀನ್ ಗ್ಲೈಕಾಲ್ ಪತ್ತೆಯಾಗಿದ್ದು,ಇದನ್ನು ಮಧ್ಯಪ್ರದೇಶ ಸರಕಾರ ಮತ್ತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ತಿಳಿಸಲಾಗಿತ್ತು. ಅ.30ರಂದು ಉತ್ಪಾದನೆಯನ್ನು ನಿಲ್ಲಿಸುವಂತೆ ಶ್ರೀಸನ್ ಫಾಮಾಸ್ಯೂಟಿಕಲ್ಗೆ ಆದೇಶಿಸಲಾಗಿತ್ತು ಮತ್ತು ಅದಕ್ಕೆ ಶೋಕಾಸ್ ನೋಟಿಸನ್ನೂ ಹೊರಡಿಸಲಾಗಿತ್ತು. ತಮಿಳುನಾಡಿನ ಪ್ರಯತ್ನಗಳಿಂದಾಗಿ ಹಲವಾರು ರಾಜ್ಯಗಳಲ್ಲಿ ಅಹಿತಕರ ಘಟನೆಗಳನ್ನು ತಡೆಯಲಾಗಿದೆ ಎಂದು ಸುಬ್ರಮಮಣಿಯನ್ ತಿಳಿಸಿದರು.
ಕೋಲ್ಡ್ರಿಫ್ ಸಿರಪ್ ಸೇವನೆಯಿಂದ 22 ಮಕ್ಕಳ ಸಾವುಗಳ ಕುರಿತು ತನಿಖೆಗೆ ತಮಿಳುನಾಡು ಸರಕಾರವು ಸಹಕರಿಸುತ್ತಿಲ್ಲ ಎಂಬ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಬ್ರಮಣಿಯನ್, ರಾಜ್ಯ ಸರಕಾರವು ತಪಾಸಣೆ ನಡೆಸಿ ಸಿರಪ್ನಲ್ಲಿಯ ವಿಷಕಾರಿ ರಾಸಾಯನಿಕವನ್ನು ಪತ್ತೆ ಹಚ್ಚಲು ಮಾಡಿದ ಪ್ರಯತ್ನಗಳಿಂದಾಗಿಯೇ ಔಷಧಿ ಕಂಪನಿ ಮಾಲಿಕರ ಬಂಧನ ಸಾಧ್ಯವಾಗಿದೆ ಎಂದು ಒತ್ತಿ ಹೇಳಿದರು.







