2014ರಿಂದ ED 6,444 ಕೇಸ್ ದಾಖಲಿಸಿ 2,416 ಚಾರ್ಜ್ ಶೀಟ್ ಸಲ್ಲಿಸಿದೆ: ಕೇಂದ್ರ ಸರಕಾರ

Photo Credit : PTI
ಹೊಸದಿಲ್ಲಿ,ಡಿ.8: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರವು ಅಧಿಕಾರಕ್ಕೆ ಬಂದ 2014ರಿಂದ ಜಾರಿ ನಿರ್ದೇಶನಾಲಯವು (ED) 16,604 ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ 6,444 ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ದಾಖಲಿಸಿದೆ ಮತ್ತು 2,416 ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದೆ. ಇದೇ ಅವಧಿಯಲ್ಲಿ ಅದು 11,106 ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಸರಕಾರವು ಸೋಮವಾರ ಸಂಸತ್ತಿನಲ್ಲಿ ತಿಳಿಸಿದೆ.
ಈ 11 ವರ್ಷಗಳಲ್ಲಿ ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯಗಳು 56 ಪ್ರಕರಣಗಳಲ್ಲಿ 121 ಜನರನ್ನು ಶಿಕ್ಷೆಗೆ ಗುರಿಪಡಿಸಿವೆ ಎಂದೂ ಅದು ಮಾಹಿತಿ ನೀಡಿದೆ.
ಈ ಅವಧಿಯಲ್ಲಿ 13,877 ಪ್ರಕರಣಗಳನ್ನು ದಾಖಲಿಸಿಕೊಂಡ ಆದಾಯ ತೆರಿಗೆ (ಐಟಿ) ಇಲಾಖೆಯು, 9,657 ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ. ಐಟಿ ಪ್ರಕರಣಗಳಲ್ಲಿ 522 ಜನರು ಶಿಕ್ಷೆಗೆ ಗುರಿಯಾಗಿದ್ದರೆ 963 ಜನರು ಖುಲಾಸೆಗೊಂಡಿದ್ದಾರೆ. ಇಲಾಖೆಯು 3,345 ಪ್ರಕರಣಗಳನ್ನು ಹಿಂದೆಗೆದುಕೊಂಡಿದೆ.
ED 2020-21ರಲ್ಲಿ 996, 2021-22ರಲ್ಲಿ 1,116, 2022-23ರಲ್ಲಿ 953, 2024-25ರಲ್ಲಿ 775 ಮತ್ತು 2025-26ರಲ್ಲಿ ನವಂಬರ್ವರೆಗೆ 556 ಪಿಎಂಎಲ್ಎ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ED 2023-24ರಲ್ಲಿ 2,600,2024-25ರಲ್ಲಿ 2,317 ಮತ್ತು 2025-26ರ ಮೊದಲ ಎಂಟು ತಿಂಗಳುಗಳಲ್ಲಿ 2,267 ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ. ಕಳೆದ 11 ವರ್ಷಗಳಲ್ಲಿ ಸಲ್ಲಿಸಲಾದ 2,416 ದೋಷಾರೋಪ ಪಟ್ಟಿಗಳ ಪೈಕಿ 1,843 ಮುಖ್ಯ ಮತ್ತು 573 ಪೂರಕ ದೋಷಾರೋಪ ಪಟ್ಟಿಗಳಾಗಿದ್ದು,13,112 ವ್ಯಕ್ತಿಗಳು ಮತ್ತು 3,292 ಕಂಪನಿಗಳನ್ನು ಹೆಸರಿಸಲಾಗಿದೆ ಎಂದೂ ಕೇಂದ್ರ ಸಹಾಯಕ ವಿತ್ತಸಚಿವ ಪಂಕಜ ಚೌಧರಿಯವರು ಲೋಕಸಭೆಯಲ್ಲಿ ತಿಳಿಸಿದರು.
ED 2024-25ರಲ್ಲಿ ದಾಖಲೆಯ 30,000 ಕೋ.ರೂ.ಮೌಲ್ಯದ ಮತ್ತು 2025-26ರ ವಿತ್ತವರ್ಷದ ಮೊದಲ ಐದು ತಿಂಗಳುಗಳಲ್ಲಿ 15,000 ಕೋ.ರೂ.ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ್ದು,ಪ್ರಸಕ್ತ ವರ್ಷದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆಯಾಗಿ 2005ರಿಂದ ಪಿಎಂಎಲ್ಎ ಅಡಿ 8,100 ಪ್ರಕರಣಗಳಲ್ಲಿ 1.70 ಲಕ್ಷ ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.







