ಅವಾಮಿ ಆ್ಯಕ್ಷನ್ ಕಮಿಟಿ, ಜಮ್ಮು-ಕಾಶ್ಮೀರ ಇತ್ತಿಹಾದುಲ್ ಮುಸ್ಲಿಮೀನ್ ಗೆ 5 ವರ್ಷ ನಿಷೇಧ ವಿಧಿಸಿದ ಕೇಂದ್ರ ಸರಕಾರ

ಕೇಂದ್ರ ಗೃಹ ಸಚಿವಾಲಯ | PTI
ಶ್ರೀನಗರ: ರಾಷ್ಟ್ರ ವಿರೋಧಿ ಚಟುವಟಿಕೆಗಳು, ಭಯೋತ್ಪಾದನೆಗೆ ಬೆಂಬಲ ಹಾಗೂ ವಿಭಜನವಾದಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದ ಆರೋಪದಲ್ಲಿ ಕಾಶ್ಮೀರದ ಪ್ರಭಾವಿ ಧರ್ಮ ಗುರು ಮಿರ್ವೈಝ್ ಉಮರ್ ಫಾರೂಕ್ ನೇತೃತ್ವದ ಅವಾಮಿ ಆ್ಯಕ್ಷನ್ ಕಮಿಟಿ ಹಾಗೂ ಶಿಯಾ ನಾಯಕ ಮಸ್ರೂರ್ ಅಬ್ಬಾಸ್ ಅನ್ಸಾರಿ ನೇತೃತ್ವದ ಜಮ್ಮು ಹಾಗೂ ಕಾಶ್ಮೀರ ಇತ್ತಿಹಾದುಲ್ ಮುಸ್ಲಿಮೀನ್ (ಜೆಕೆಐಎಂ)ಗೆ ಕೇಂದ್ರ ಸರಕಾರ ಮಂಗಳವಾರ ನಿಷೇಧ ಹೇರಿದೆ.
ಫಾರೂಕ್ ಅವರು ಪ್ರತ್ಯೇಕತಾವಾದಿ ಒಕ್ಕೂಟ ಆಲ್ ಪಾರ್ಟಿಸ್ ಹುರಿಯತ್ ಕಾನ್ಫರೆನ್ಸ್ನ ಅಧ್ಯಕ್ಷ ಹಾಗೂ ಕಾಶ್ಮೀರದ ಅತ್ಯಂತ ಭವ್ಯ, ಅತ್ಯಧಿಕ ಪ್ರಭಾವಶಾಲಿ ಮಸೀದಿಯಾಗಿರುವ ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಧರ್ಮೋಪದೇಶ ನೀಡುವ ಮುಖ್ಯ ಧರ್ಮಗುರು.
ಅನ್ಸಾರಿ ಕೂಡ ಆಲ್ ಪಾರ್ಟಿಸ್ ಹುರಿಯತ್ ಕಾನ್ಪರೆನ್ಸ್ನ ಹಿರಿಯ ನಾಯಕ ಹಾಗೂ ಕಾಶ್ಮೀರದ ಶಿಯಾ ನಾಯಕ.
ಅವಾಮಿ ಆ್ಯಕ್ಸನ್ ಕಮಿಟಿ (ಎಎಸಿ) ಕೂಡ ದೇಶದ ಸಮಗ್ರತೆ, ಸಾವಭೌಮತೆ ಹಾಗೂ ಭದ್ರತೆಗೆ ಅಡ್ಡಿ ಉಂಟು ಮಾಡುವ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆ ಹೇಳಿದೆ.





