ಕೇಂದ್ರ ಸರಕಾರ ಯಾವುದೇ ವಕ್ಫ್ ಆಸ್ತಿಗಳನ್ನು ವಶಪಡಿಸಿಕೊಳ್ಳುವುದಿಲ್ಲ: ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ಸ್ಪಷ್ಟನೆ

ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ | PTI
ಹೊಸದಿಲ್ಲಿ: ಕೇಂದ್ರ ಸರಕಾರ ಯಾವುದೇ ವಕ್ಫ್ ಆಸ್ತಿಗಳನ್ನು ವಶಪಡಿಸಿಕೊಳ್ಳುವುದಿಲ್ಲ ಹಾಗೂ ಅವು ವಕ್ಫ್ ಮಂಡಳಿಯ ನಿಯಂತ್ರಣದಲ್ಲಿಯೇ ಉಳಿದುಕೊಳ್ಳಲಿವೆ ಎಂದು ವಕ್ಫ್ (ತಿದ್ದುಪಡಿ) ವಿಧೇಯಕದ ಕುರಿತ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರಾದ ಜಗದಾಂಬಿಕಾ ಪಾಲ್ ಬುಧವಾರ ತಿಳಿಸಿದ್ದಾರೆ. ವಕ್ಫ್ ತಿದ್ದುಪಡಿ ಕಾಯ್ದೆಯ ಮೂಲಕ ಮೋದಿ ಸರಕಾರವು ವಕ್ಫ್ ಆಸ್ತಿಗಳನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆಯೆಂದು ಮುಸ್ಲಿಂ ಸಂಘಟನೆಗಳ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟೀಕರಣ ನೀಡಿದ್ದಾರೆ.
ಜಂಟಿ ಸಮಿತಿಯ ಮೊದಲ ಸಭೆಯಲ್ಲಿ ಪ್ರಸ್ತಾವಿತ ವಕ್ಫ್ ತಿದ್ದುಪಡಿ ಕಾಯ್ದೆಗೆ ಹಲವಾರು ತಿದ್ದುಪಡಿಗಳನ್ನು ಮಾಡುವ ಕುರಿತು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಭಿನ್ನಾಭಿಪ್ರಾಯ ಭುಗಿಲೆದ್ದ ಕೆಲವು ದಿನಗಳ ಬಳಿಕ ಜಗದಂಬಿಕಾ ಪಾಲ್ ಈ ಪ್ರತಿಕ್ರಿಯೆ ನೀಡಿದ್ದಾರೆ. ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರ ಸೇರ್ಪಡೆ ಹಾಗೂ ಮಂಡಳಿಯ ಕಾರ್ಯನಿರ್ವಹಣೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದಕ್ಕೆ ಎನ್ಡಿಎ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ತೆಲುಗುದೇಶಂ (ಟಿಡಿಪಿ) ಹಾಗೂ ಲೋಕಜನಶಕ್ತಿ (ರಾಮ್ವಿಲಾಸ್) ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ವಕ್ಫ್ ಸೊತ್ತುಗಳ ಮೇಲೆ ವಕ್ಫ್ ಮಂಡಳಿಗಳ ಸ್ವಾಯತ್ತೆಯನ್ನು ಕಸಿದುಕೊಳ್ಳುತ್ತಿರುವ ಬಗ್ಗೆ ಪ್ರತಿಪಕ್ಷಗಳ ಕಳವಳಗಳಿಗೆ ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಜಗದಾಂಬಿಕಾ ಪಾಲ್ ಅವರು,‘‘ ವಕ್ಫ್ ಆಸ್ತಿಗಳು ವಕ್ಫ್ ಮಂಡಳಿಯ ನಿಯಂತ್ರಣದಲ್ಲೇ ಇರುತ್ತವೆ. ಸರಕಾರವು ಯಾವುದೇ ವಕ್ಫ್ ಆಸ್ತಿಯನ್ನು ಕಸಿದುಕೊಳ್ಳುವುದಿಲ್ಲ ಎಂದು ಹೇಳಿದರು.
ವಕ್ಫ್ ಆಸ್ತಿಗಳ ಉತ್ತಮ ಆಡಳಿತ ನಿರ್ವಹಣೆಗಾಗಿ ಸರಕಾರವು ಈ ವಿಧೇಯಕವನ್ನು ತಂದಿದೆ. ಅವುಗಳಿಗೆ ತಿದ್ದುಪಡಿಗಳನ್ನು ಮಾಡಲಿಕ್ಕಿದ್ದು, ಈ ಬಗ್ಗೆ ಜೆಪಿಸಿಯೊಂದನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿವಾದಾತ್ಮಕ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಕಳೆದ ವಾರ ಹೇಳಿಕೆಯೊಂದನ್ನು ನೀಡಿ, ವಿಧೇಯಕವನ್ನು ಹಿಂಪಡೆಯದೇ ಇದ್ದಲ್ಲಿ ತಾವು ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಆರಂಭಿಸುವುದಾಗಿ ಎಚ್ಚರಿಕೆ ನೀಡಿತ್ತು. ಎನ್ಡಿಎ ಮೈತ್ರಿಕೂಟದ ಪ್ರಮುಖ ಅಂಗಪಕ್ಷಗಳಾದ ಟಿಡಿಪಿಯ ಚಂದ್ರಬಾಬು ನಾಯ್ಡು ಹಾಗೂ ಜೆಡಿಯು ಪಕ್ಷದ ನಿತೀಶ್ ಕುಮಾರ್ ಕೂಡಾ ತಮ್ಮ ಪಕ್ಷಗಳು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆಂದು ಎಐಎಂಪಿಎಲ್ಬಿ ಮುಖಂಡರು ತಿಳಿಸಿದ್ದರು.







