ವಕ್ಫ್ ಆಸ್ತಿಗಳ ನೋಂದಣಿ ಹಾಗೂ ಮೇಲ್ವಿಚಾರಣೆಗೆ ಕೇಂದ್ರಿಕೃತ ಪೋರ್ಟಲ್; ಕೇಂದ್ರ ಸರ್ಕಾರದಿಂದ ಅಧಿಸೂಚನೆ

PC: x.com/NewsroomPostCom
ಹೊಸದಿಲ್ಲಿ: ವಕ್ಫ್ ಮಂಡಳಿಯಲ್ಲಿ ನೋಂದಾಯಿತವಾಗಿರುವ ಎಲ್ಲ ಆಸ್ತಿಗಳನ್ನು ಕಳೆದ ತಿಂಗಳು ಚಾಲನೆಗೊಂಡಿರುವ ಸೆಂಟ್ರಲ್ ವಕ್ಫ್ ಪೋರ್ಟಲ್ ನಲ್ಲಿ ನೋಂದಾಯಿಸುವ ಪ್ರಕ್ರಿಯೆಗೆ ಸಂಬಂಧಿಸಿದ ವಿವರವಾದ ವಿಧಿವಿಧಾನಗಳನ್ನು ವಿವರಿಸುವ ಏಕೀಕೃತ ವಕ್ಫ್ ನಿರ್ವಹಣೆ ಸಬಲೀಕರಣ ಕ್ಷಮತೆ ಮತ್ತು ಅಭಿವೃದ್ಧಿ ನಿಯಮಾವಳಿ-2025ರ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಈ ಹೊಸ ಪೋರ್ಟೆಲ್ ವಕ್ಫ್ ಆಸ್ತಿಗಳ ಎಲ್ಲ ದತ್ತಾಂಶಗಳನ್ನು ದಾಖಲಿಸಲಿದೆ. ಅಲ್ಲದೆ ಅವುಗಳ ನೋಂದಣಿ ಪ್ರಕ್ರಿಯೆ, ಲೆಕ್ಕಪತ್ರಗಳ ಪರಿಶೋಧನೆ ಮತ್ತು ನಿರ್ವಹಣೆ ಬಗೆಗೂ ನಿಯಮಗಳನ್ನು ರೂಪಿಸಲಾಗಿದೆ.
ಉದಾಹರಣೆಗೆ ವಕ್ಫ್ (ತಿದ್ದುಪಡಿ) ಕಾಯ್ದೆ-2025 ಜಾರಿಗೆ ಬಂದ ಬಳಿಕ ಅಂದರೆ ಏಪ್ರಿಲ್ 8 ಅಥವಾ ಅದಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ವಕ್ಫ್ ಆಸ್ತಿಯ ವಿವರಗಳು, ಗಡಿ, ಅದರ ಬಳಕೆ ಹಾಗೂ ಯಾರ ಸ್ವಾಧೀನದಲ್ಲಿದೆ ಎಂಬ ಮಾಹಿತಿಗಳನ್ನು ವಕ್ಫ್ ಉಸ್ತುವಾರಿ ಹೊಂದಿರುವ ಮುತವಲ್ಲಿಗಳು ದಾಖಲಿಸಬೇಕಾಗುತ್ತದೆ. ಇದರ ಜತೆಗೆ ವಕ್ಫ್ ಸೃಷ್ಟಿಸಿದವರ ಹೆಸರು ಮತ್ತು ವಿಳಾಸ, ಸೃಷ್ಟಿಯ ದಿನಾಂಕ ಹಾಗೂ ವಿಧಾನ, ವಕ್ಫ್ ಒಪ್ಪಂದಗಳನ್ನೂ ಲಭ್ಯವಿದ್ದಲ್ಲಿ ದಾಖಲಿಸಬೇಕು. ಫಲಾನುಭವಿಗಳ ವಿವರ, ವಕ್ಫ್ ಆಸ್ತಿಗಳ ವಾರ್ಷಿಕ ಆದಾಯ, ಭೂಕಂದಾಯ, ಪ್ರಕರಣಗಳು, ವಾರ್ಷಿಕವಾಗಿ ಪಾವತಿಸುವ ತೆರಿಗೆ, ವಕ್ಫ್ ಸೃಷ್ಟಿಸಿದ ಉದ್ದೇಶಗಳ ವಿವರಗಳನ್ನೂ ದಾಖಲಿಸಲು ಸೂಚಿಸಲಾಗಿದೆ.
ಎಲ್ಲ ವಕ್ಫ್ ಆಸ್ತಿಗಳ ವಿವರಗಳನ್ನು ವಕ್ಫ್ ಕಾಯ್ದೆ ನಿಗದಿಪಡಿಸಿರುವ ಆರು ತಿಂಗಳ ಒಳಗಾಗಿ ದಾಖಲಿಸಬೇಕಿದೆ. ಕೇಂದ್ರ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ದೇಶದಲ್ಲಿ 9 ಲಕ್ಷ ವಕ್ಫ್ ಆಸ್ತಿಗಳು ಇವೆ.