ಭವಿಷ್ಯ ನಿಧಿ ಠೇವಣಿಗಳಿಗೆ 8.25 ಶೇ. ಬಡ್ಡಿಗೆ ಕೇಂದ್ರ ಅಂಗೀಕಾರ

PC : www.epfindia.gov.in
ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗಳಿಗೆ ಆರ್ಥಿಕ ವರ್ಷ 2025ರ ಸಾಲಿಗೆ 8.25 ಶೇಕಡ ಬಡ್ಡಿದರ ಪಾವತಿಸಲು ಕೇಂದ್ರ ಸರಕಾರ ಅಂಗೀಕಾರ ನೀಡಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು, ಭವಿಷ್ಯ ನಿಧಿ ಠೇವಣಿಗಳಿಗೆ 2024-25ರ ಹಣಕಾಸು ವರ್ಷಕ್ಕೆ 8.25 ಶೇಕಡ ಬಡ್ಡಿ ದರವನ್ನು ಉಳಿಸಿಕೊಳ್ಳಲು ಫೆಬ್ರವರಿ 28ರಂದು ನಿರ್ಧರಿಸಿತ್ತು. ಹಿಂದಿನ ಹಣಕಾಸು ವರ್ಷದಲ್ಲಿಯೂ ಇದೇ ಬಡ್ಡಿದರವನ್ನು ವಿಧಿಸಲಾಗಿತ್ತು. ಈ ಪ್ರಸ್ತಾವವನ್ನು ಹಣಕಾಸು ಸಚಿವಾಲಯದ ಅಂಗೀಕಾರಕ್ಕಾಗಿ ಕಳುಹಿಸಲಾಗಿತ್ತು.
‘‘2024-25ರ ಹಣಕಾಸು ವರ್ಷಕ್ಕೆ ಭವಿಷ್ಯ ನಿಧಿ ಠೇವಣಿಗಳಿಗೆ 8.25 ಶೇಕಡ ದರದಲ್ಲಿ ಬಡ್ಡಿ ನೀಡುವ ಪ್ರಸ್ತಾವಕ್ಕೆ ಹಣಕಾಸು ಸಚಿವಾಲಯ ಅಂಗೀಕಾರ ನೀಡಿದೆ. ಈ ಸಂಬಂಧದ ಮಾಹಿತಿಯನ್ನು ಕಾರ್ಮಿಕ ಸಚಿವಾಲಯವು ಗುರುವಾರ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಗೆ ಕಳುಹಿಸಿದೆ’’ ಎಂದು ಕಾರ್ಮಿಕ ಸಚಿವಾಲಯದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಇನ್ನು 8.25 ಶೇಕಡ ದರದಲ್ಲಿ ಬಡ್ಡಿ ಮೊತ್ತವನ್ನು ಏಳು ಕೋಟಿಗೂ ಅಧಿಕ ಭವಿಷ್ಯ ನಿಧಿ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ ಸುಖ್ ಮಾಂಡವೀಯ ಅಧ್ಯಕ್ಷತೆಯಲ್ಲಿ ಫೆಬ್ರವರಿ 28ರಂದು ಹೊಸದಿಲ್ಲಿಯಲ್ಲಿ ನಡೆದ ಭವಿಷ್ಯ ನಿಧಿ ಸಂಸ್ಥೆಯ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ 237ನೇ ಸಭೆಯಲ್ಲಿ ಬಡ್ಡಿ ದರ ಕುರಿತ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.





