ಗೌತಮ್ ಅದಾನಿಗೆ ಅಮೆರಿಕದ ಸಮನ್ಸ್ ಜಾರಿಗೊಳಿಸಲು ಗುಜರಾತ್ ನ್ಯಾಯಾಲಯಕ್ಕೆ ಕೇಂದ್ರ ಸರಕಾರ ಸೂಚನೆ

ಗೌತಮ್ ಅದಾನಿ (Photo: PTI)
ಹೊಸದಿಲ್ಲಿ: ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧ ಯುಎಸ್ ಸೆಕ್ಯೂರಿಟಿಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ) ಹೊರಡಿಸಿರುವ ಸಮನ್ಸ್ನ್ನು ಫೆಬ್ರವರಿಯಲ್ಲಿ ಅಹ್ಮದಾಬಾದ್ನ ಸೆಷನ್ಸ್ ನ್ಯಾಯಾಲಯಕ್ಕೆ ರವಾನಿಸಿರುವ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು, ಅದನ್ನು ನಗರದಲ್ಲಿ ವಿಳಾಸವನ್ನು ಹೊಂದಿರುವ ಅದಾನಿಗೆ ಜಾರಿಗೊಳಿಸುವಂತೆ ಸೂಚಿಸಿದೆ.
ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗಿದ್ದು,ಅವು ಸಿವಿಲ್ ಮತ್ತು ವಾಣಿಜ್ಯ ವಿಷಯಗಳಲ್ಲಿ ನ್ಯಾಯಾಂಗ ಮತ್ತು ನ್ಯಾಯಾಂಗೇತರ ಸಮನ್ಸ್ ಜಾರಿಗೆ ಸಂಬಂಧಿಸಿದ 1965ರ ಹೇಗ್ ಒಪ್ಪಂದಕ್ಕೆ ಅನುಗುಣವಾಗಿವೆ, ಸಮನ್ಸ್ನ್ನು ಮುಂದಿನ ಕ್ರಮಕ್ಕಾಗಿ ಫೆ.25ರಂದು ಅಹ್ಮದಾಬಾದ್ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ ಎಂದು ಸರಕಾರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಅದಾನಿ ಗ್ರೀನ್ ಲಿ.ಮತ್ತು ಅಝುರೆ ಪವರ್ಗೆ ಲಾಭವಾಗುವಂತೆ ಮಾರುಕಟ್ಟೆಗಿಂತ ಹೆಚ್ಚಿನ ದರಗಳಲ್ಲಿ ಸೌರ ವಿದ್ಯುತ್ ಪೂರೈಕೆಗಾಗಿ ಒಪ್ಪಂದಗಳನ್ನು ಮಾಡಿಕೊಳ್ಳಲು ಭಾರತ ಸರಕಾರದ ಅಧಿಕಾರಿಗಳಿಗೆ ಮಿಲಿಯಗಟ್ಟಲೆ ಲಂಚಪಾವತಿಯನ್ನು ಅದಾನಿ ಮತ್ತು ಅವರ ಸೋದರಪುತ್ರ ಸಾಗರ ಅದಾನಿ ಅಮೆರಿಕದ ಹೂಡಿಕೆದಾರರಿಂದ ಮುಚ್ಚಿಟ್ಟಿದ್ದಾರೆ ಎಂದು ನ್ಯೂಯಾಕ್ ಪೂರ್ವ ಜಿಲ್ಲೆಯ ಫೆಡರಲ್ ಪ್ರಾಸಿಕ್ಯೂಟರ್ಗಳು ಆರೋಪಿಸಿರುವ ಹಿನ್ನಲೆಯಲ್ಲಿ ಎಸ್ಇಸಿ ಅಲ್ಲಿಯ ಯುಎಸ್ ಜಿಲ್ಲಾ ನ್ಯಾಯಾಲಯದಲ್ಲಿ ಅವರಿಬ್ಬರ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿದೆ.
ಈ ಮೊಕದ್ದಮೆಯು ಅದಾನಿ ಗ್ರೂಪ್ನಲ್ಲಿ ಅನಿಶ್ಚಿತತೆಗೆ ಕಾರಣವಾಗಿದೆ. ಆದಾಗ್ಯೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ನೂತನ ಆಡಳಿತವು ಫಾರಿನ್ ಕರಪ್ಟ್ ಪ್ರ್ಯಾಕ್ಟೀಸಸ್ ಆ್ಯಕ್ಟ್,1977ರ ಎಲ್ಲ ಅನುಷ್ಠಾನಗಳನ್ನು ತಡೆಹಿಡಿದಿರುವುದರಿಂದ ಆ ದೇಶದಲ್ಲಿ ಅದಾನಿ ವಿರುದ್ಧದ ಕಾನೂನು ವಿಷಯಗಳು ಮಂದಗತಿಯಲ್ಲಿ ಸಾಗಬಹುದು ಎಂಬ ಭರವಸೆಯೊಂದಿಗೆ ಅದಾನಿ ಗ್ರೂಪ್ ಕಾರ್ಯನಿರ್ವಹಿಸುತ್ತಿದ್ದು,ಅಮೆರಿಕದಲ್ಲಿ ವ್ಯವಹಾರ ಅವಕಾಶಗಳಿಗಾಗಿ ಅನ್ವೇಷಣೆಯನ್ನು ಪುನರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ.