ಮಾಲಿಯಲ್ಲಿ ಭಯೋತ್ಪಾದಕರಿಂದ ಅಪಹೃತ ಮೂವರು ಭಾರತೀಯರ ಗುರುತು ದೃಢಪಡಿಸಿದ ಕೇಂದ್ರ

ಹೊಸದಿಲ್ಲಿ: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಜು.1ರಂದು ಶಂಕಿತ ಭಯೋತ್ಪಾದಕರಿಂದ ಅಪಹೃತ ಮೂವರು ಭಾರತೀಯರ ಗುರುತುಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೃಢಪಡಿಸಿದೆ. ತಾನು ಮಾಲಿ ಅಧಿಕಾರಿಗಳು,ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳು ಮತ್ತು ಅಪಹೃತರ ಕುಟುಂಬಗಳೊಂದಿಗೆ ನಿಯಮಿತ ಸಂಪರ್ಕದಲ್ಲಿರುವುದಾಗಿ ಅದು ತಿಳಿಸಿದೆ.
ಅಲ್-ಕೈದಾದೊಂದಿಗೆ ಸಂಬಂಧ ಹೊಂದಿರುವ ನುಸ್ರತ್ ಅಲ್-ಇಸ್ಲಾಮ್ ವಾಲ್-ಮುಸ್ಲಿಮೀನ್(ಜೆಎನ್‌ಐಎಂ)ನ ಶಂಕಿತ ಭಯೋತ್ಪಾದಕರು ಪಶ್ಚಿಮ ಮಾಲಿಯ ಕೇಯೆಸ್ ಪ್ರದೇಶದಲ್ಲಿರುವ ಡೈಮಂಡ್ ಸಿಮೆಂಟ್ ಫ್ಯಾಕ್ಟರಿಯ ಮೇಲೆ ಶಸ್ತ್ರಸಜ್ಜಿತ ದಾಳಿ ನಡೆಸಿದ ಸಂದರ್ಭ ಈ ಅಪಹರಣಗಳು ನಡೆದಿವೆ.
ಈವರೆಗೆ ಗುಂಪು ಬಹಿರಂಗವಾಗಿ ಅಪಹರಣದ ಹೊಣೆಯನ್ನು ಹೊತ್ತುಕೊಂಡಿಲ್ಲ, ಆದರೆ ದಾಳಿಯನ್ನು ಜೆಎನ್‌ಐಎಂ ಇತ್ತೀಚಿಗೆ ನಡೆಸಿದ ಕಾರ್ಯಾಚರಣೆಗಳೊಂದಿಗೆ ತಳುಕು ಹಾಕಲಾಗಿದೆ. ಗುಂಪು ಈ ಹಿಂದೆ ಮಾಲಿ,ನೈಜರ್ ಮತ್ತು ಬುರ್ಕಿನಾ ಫಾಸೊಗಳಲ್ಲಿ ವಿದೇಶಿ ಕಾರ್ಮಿಕರು, ಸರಕಾರಿ ಕಟ್ಟಡಗಳು ಮತ್ತು ಮಿಲಿಟರಿ ಔಟ್ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಿತ್ತು.
ಅಪಹೃತರ ಪೈಕಿ ಪ್ರಕಾಶ್ ಚಂದ್ ಜೋಶಿ ರಾಜಸ್ಥಾನದ ಜೈಪುರ ನಿವಾಸಿಯಾಗಿದ್ದರೆ 2015ರಿಂದ ಮಾಲಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಅಮರಲಿಂಗೇಶ್ವರ್ ರಾವ್(45) ಅವರು ತೆಲಂಗಾಣದ ಮಿರ್ಯಾಲಗುಡಾ ನಿವಾಸಿಯಾಗಿದ್ದಾರೆ. ಒಡಿಶಾದ ಗಂಜಾಂ ಜಿಲ್ಲೆ ಮೂಲದ ಪಿ.ವೆಂಕಟರಮಣ್(28) ಮುಂಬೈನ ಬ್ಲ್ಯೂಸ್ಟಾರ್ ಪ್ರೈ.ಲಿ.ನ ಉದ್ಯೋಗಿಯಾಗಿದ್ದು ಆರು ತಿಂಗಳುಗಳಿಂದ ಡೈಮಂಡ್ ಸಿಮೆಂಟ್ ಫ್ಯಾಕ್ಟರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.







