ಮಹಾರಾಷ್ಟ್ರ: ಮಾವೋವಾದಿಗಳ ಹಿಡಿತವಿದ್ದ ಗಡ್ಚಿರೋಲಿಯಲ್ಲಿ ಅದಿರು ಸಂಸ್ಕರಣಾ ಘಟಕಕ್ಕೆ ಕೇಂದ್ರದ ಅನುಮೋದನೆ
1 ಲಕ್ಷಕ್ಕೂ ಅಧಿಕ ಮರಗಳ ನೆಲಸಮಕ್ಕೆ ಅನುಮತಿ!

ಸಾಂದರ್ಭಿಕ ಚಿತ್ರ (credit: Grok)
ಮುಂಬೈ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಅರಣ್ಯದಲ್ಲಿ ಕಬ್ಬಿಣದ ಅದಿರು ಸಂಸ್ಕರಣಾ ಘಟಕಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಇದು ಲಕ್ಷಾಂತರ ಮರಗಳ ನೆಲಸಮಕ್ಕೆ ಕಾರಣವಾಗಲಿದೆ ಎಂದು indianexpress.com ವರದಿ ಮಾಡಿದೆ.
ಮಾವೋವಾದಿಗಳು ಸಕ್ರಿಯರಾಗಿರುವ ಗಡ್ಚಿರೋಲಿ ಜಿಲ್ಲೆಯ 937 ಹೆಕ್ಟೇರ್ ಅರಣ್ಯ ಭೂಮಿಯನ್ನು ಲಾಯ್ಡ್ ಮೆಟಲ್ಸ್ ಮತ್ತು ಎನರ್ಜಿ ಲಿಮಿಟೆಡ್ನ ಕಬ್ಬಿಣದ ಅದಿರು ಸಂಸ್ಕರಣಾ ಘಟಕಕ್ಕೆ ಸಚಿವಾಲಯ ಅನುಮತಿಯನ್ನು ನೀಡಿದೆ. ಇದರಿಂದ 1.23 ಲಕ್ಷ ಮರಗಳ ನೆಲಸಮ ನಡೆಯಲಿದೆ ಎಂಬುದನ್ನು ಸಚಿವಾಲಯದ ದಾಖಲೆಗಳು ತಿಳಿಸುತ್ತದೆ.
ಮಾವೋವಾದಿಗಳ ಹಿಡಿತವಿದ್ದ ಜಿಲ್ಲೆಯಲ್ಲಿ ಗಣಿಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆ ವಿಸ್ತರಿಸಲು ಮಹಾರಾಷ್ಟ್ರ ಸರಕಾರ ಒತ್ತಾಯಿಸುತ್ತಿರುವ ಮಧ್ಯೆ ಪ್ರಸ್ತಾವಿತ ಘಟಕಕ್ಕೆ ಅರಣ್ಯ ಅನುಮತಿ ನೀಡಲಾಗಿದೆ. ಈ ಮೊದಲು ಈ ಪ್ರದೇಶದಲ್ಲಿ ಯಾವುದೇ ಚಟುವಟಿಕೆಗಳಿಗೆ ಮಾವೋವಾದಿಗಳು ಅಡ್ಡಿಪಡಿಸುತ್ತಿದ್ದರು.
ಕಂಪೆನಿಗೆ ಆರಂಭದಲ್ಲಿ 2007ರಲ್ಲಿ 20 ವರ್ಷಗಳ ಅವಧಿಗೆ 348 ಹೆಕ್ಟೇರ್ ಗಣಿಗಾರಿಕೆ ಗುತ್ತಿಗೆಯನ್ನು ನೀಡಲಾಯಿತು. ನಂತರ ಅದನ್ನು ಮೇ 2057ರವರೆಗೆ ವಿಸ್ತರಿಸಲಾಯಿತು ಎಂದು ಕಂಪೆನಿ ಕೇಂದ್ರಕ್ಕೆ ದಾಖಲೆಯನ್ನು ಸಲ್ಲಿಸಿದೆ.
ಅರಣ್ಯ ಅನುಮತಿ ಕೋರುವ ಪ್ರಸ್ತಾವನೆಗಳನ್ನು ಪರಿಶೀಲಿಸುವ ಸಚಿವಾಲಯದ ಅರಣ್ಯ ಸಲಹಾ ಸಮಿತಿ (FAC) ಶಿಫಾರಸಿನ ನಂತರ ಮೇ 12ರಂದು ಷರತ್ತುಬದ್ಧ ತಾತ್ವಿಕ ಅನುಮೋದನೆಯನ್ನು ನೀಡಲಾಗಿದೆ.
ಪರಿಸರ ಜವಾಬ್ದಾರಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಅರಣ್ಯ ಭೂಮಿಯನ್ನು ಹಂತ ಹಂತವಾಗಿ ಮತ್ತು ನಿಯಂತ್ರಿತ ರೀತಿಯಲ್ಲಿ ಕಟ್ಟುನಿಟ್ಟಾಗಿ ಬಳಸಬೇಕು ಎಂದು ವಿಧಿಸಲಾದ ಪ್ರಮುಖ ಷರತ್ತುಗಳಲ್ಲಿ ಹೇಳಲಾಗಿದೆ. ಮೊದಲ ಹಂತದಲ್ಲಿ 300 ಹೆಕ್ಟೇರ್ಗಳು, ಎರಡನೇ ಹಂತದಲ್ಲಿ 200 ಹೆಕ್ಟೇರ್ಗಳಂತೆ 937 ಹೆಕ್ಟೇರ್ಗಳನ್ನು ಮೂರು ಹಂತಗಳಲ್ಲಿ ಬಳಸಬೇಕಾಗಿದೆ. ಇದಲ್ಲದೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ಅನುಮೋದನೆ ಪಡೆಯುವಂತೆ ಸಚಿವಾಲಯ ಕಂಪೆನಿಗೆ ನಿರ್ದೇಶನ ನೀಡಿದೆ.







