ಎಪ್ರಿಲ್, ಮೇ ತಿಂಗಳುಗಳಲ್ಲಿ ಕೇಂದ್ರ ಸರಕಾರವು 62 ನಿರ್ಬಂಧ ಆದೇಶಗಳನ್ನು ಹೊರಡಿಸಿತ್ತು: ಎಕ್ಸ್

ಹೊಸದಿಲ್ಲಿ: ಸರಕಾರವು ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ 12,000 ಯುಆರ್‌ಎಲ್‌ಗಳು ಮತ್ತು 10,500 ಖಾತೆಗಳನ್ನು ಗುರಿಯಾಗಿಸಿಕೊಂಡು 62ಕ್ಕೂ ಅಧಿಕ ತುರ್ತು ನಿರ್ಬಂಧ ಆದೇಶಗಳನ್ನು ಹೊರಡಿಸಿತ್ತು ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಬಹಿರಂಗಗೊಳಿಸಿದೆ. ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟುಗಳು ಸಮರ್ಪಕವಾಗಿವೆ ಮತ್ತು ಕಂಟೆಂಟ್ ಅನ್ನು ನಿಯಂತ್ರಿಸಲು ಸರಕಾರಕ್ಕೆ ವಿವಾದಾತ್ಮಕ ಸಮಾನಾಂತರ ಕಾರ್ಯವಿಧಾನಗಳ ಅಗತ್ಯವಿಲ್ಲ ಎನ್ನುವುದಕ್ಕೆ ಇದು ಪುರಾವೆಯಾಗಿದೆ ಎಂದು ಎಕ್ಸ್ ಒತ್ತಿ ಹೇಳಿದೆ.
ಎ.22ರಂದು ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನದಲ್ಲಿಯ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ‘ಆಪರೇಷನ್ ಸಿಂಧೂರ’ದ ಬಳಿಕ ಉದ್ವಿಗ್ನತೆಯು ಉತ್ತುಂಗಕ್ಕೇರಿದ್ದ ಸಂದರ್ಭದಲ್ಲಿ ಹೊರಡಿಸಲಾಗಿದ್ದ ನಿರ್ಬಂಧ ಆದೇಶಗಳ ಸಂಖ್ಯೆಯನ್ನು ಎಕ್ಸ್ ಜು.7ರಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಹೇಳಿಕೆಯಲ್ಲಿ ಬಹಿರಂಗಗೊಳಿಸಿದೆ. ಕಂಟೆಂಟ್‌ಗಳನ್ನು ತೆಗೆದುಹಾಕುವ ಆದೇಶಗಳನ್ನು ಹೊರಡಿಸಲು ಸರಕಾರದಿಂದ ಸಹಯೋಗ ಪೋರ್ಟಲ್ ಮತ್ತು ಮಾಹಿತಿ ತಂತ್ರಜ್ಞಾನ(ಐಟಿ) ಕಾಯ್ದೆಯ ಕಲಂ 79(3)(ಬಿ)ಯ ಬಳಕೆಯನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿರುವ ಎಕ್ಸ್,ಈ ಕಾರ್ಯವಿಧಾನಗಳು ಅಸಾಂವಿಧಾನಿಕವಾಗಿವೆ ಮತ್ತು ಸೂಕ್ತ ಕಾನೂನು ಸುರಕ್ಷತಾ ಕ್ರಮಗಳನ್ನು ಮೀರುತ್ತವೆ ಎಂದು ವಾದಿಸಿದೆ.
ಆ ಎರಡು ತಿಂಗಳುಗಳಲ್ಲಿ 62 ತುರ್ತು ಆದೇಶಗಳ ಭಾರೀ ಪ್ರಮಾಣವು ಸರಕಾರದಿಂದ ಕಂಟೆಂಟ್‌ನ್ನು ಮಿತಗೊಳಿಸುವ ನಿರ್ದೇಶನಗಳ ಈ ಹಿಂದೆ ತಿಳಿದಿರದ ವ್ಯಾಪ್ತಿಯನ್ನು ಬಹಿರಂಗಗೊಳಿಸಿದೆ ಎಂದು ಹೇಳಿರುವ ಎಕ್ಸ್, 62 ಆದೇಶಗಳಲ್ಲಿ ಅನ್ವಯಿಸಲಾಗಿರುವ ಐಟಿ ಕಾಯ್ದೆಯ ಕಲಂ 69ಎ ಅಡಿಯ ಪ್ರಸ್ತುತ ಕಾನೂನು ಕಾರ್ಯವಿಧಾನಗಳು ಸಾಕಾಗುತ್ತವೆ ಮತ್ತು ಭದ್ರತಾ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಇವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಹೀಗಾಗಿ ಸಮಾನಾಂತರ ಕಾರ್ಯವಿಧಾನಗಳ ಅಗತ್ಯವಿಲ್ಲ ಎಂದು ವಾದಿಸಿದೆ.
ಎಕ್ಸ್‌ನ ಪ್ರಮುಖ ಗುರಿ ಸರಕಾರದ ಸಹಯೋಗ ಪೋರ್ಟಲ್ ಆಗಿದೆ. ಈ ಪೋರ್ಟಲ್ ಸೂಕ್ತ ಅಧಿಕಾರವನ್ನು ಹೊಂದಿರದ ಸಾವಿರಾರು ಅಧಿಕಾರಿಗಳಿಗೆ ನಿರ್ಬಂಧಿಸುವ ಅಧಿಕಾರವನ್ನು ನೀಡುತ್ತದೆ ಮತ್ತು ಇದು ಅಸಾಂವಿಧಾನಿಕವಾಗಿದೆ ಎಂದು ಅದು ವಾದಿಸಿದೆ.







