ನೈಸರ್ಗಿಕ ವಿಕೋಪ ಪೀಡಿತ ರಾಜ್ಯಗಳಿಗೆ 1,554.99 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ ಕೇಂದ್ರ: ಕೇರಳಕ್ಕೆ ಬಿಡಿಗಾಸೂ ಇಲ್ಲ!

PC - new indian express
ಹೊಸದಿಲ್ಲಿ: 2024ರಲ್ಲಿ ಪ್ರವಾಹ, ದಿಢೀರ್ ಪ್ರವಾಹ, ಭೂಕುಸಿತ ಹಾಗೂ ಚಂಡಮಾರುತಗಳಿಂದ ಬಾಧಿತವಾಗಿದ್ದ ಐದು ರಾಜ್ಯಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ 1,554.99 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಿದೆ. ಆದರೆ, ಈ ಹೆಚ್ಚುವರಿ ಅನುದಾನದಲ್ಲಿ ವಯನಾಡ್ ಭೂಕುಸಿತ ಸಂಭವಿಸಿದ್ದ ಕೇರಳಕ್ಕೆ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ.
ಒಟ್ಟು 1,554.99 ಕೋಟಿ ರೂ. ಹೆಚ್ಚುವರಿ ಅನುದಾನದ ಪೈಕಿ ಆಂಧ್ರಪ್ರದೇಶಕ್ಕೆ 608.08 ಕೋಟಿ ರೂ., ನಾಗಾಲ್ಯಾಂಡ್ ಗೆ 170.99 ಕೋಟಿ ರೂ. ಒಡಿಶಾಗೆ 255.24 ಕೋಟಿ ರೂ., ತೆಲಂಗಾಣಗೆ 231.75 ಕೋಟಿ ರೂ. ಹಾಗೂ ತ್ರಿಪುರಾಗೆ 288.93 ಕೋಟಿ ರೂ. ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜುಲೈ 2024ರಲ್ಲಿ ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಮುಂಡಕ್ಕೈ-ಚೂರಲ್ಮಲ ಗ್ರಾಮಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದವು. 400ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಸಾವಿರಾರು ಮಂದಿ ನಿರ್ವಸಿತರಾಗಿದ್ದರು. ಹೀಗಿದ್ದೂ, ಕೇಂದ್ರ ಸರಕಾರದ ಈ ಹೆಚ್ಚುವರಿ ಅನುದಾನದ ಪಟ್ಟಿಯಲ್ಲಿ ಕೇರಳ ರಾಜ್ಯವನ್ನು ಸೇರ್ಪಡೆ ಮಾಡಲಾಗಿಲ್ಲ.
ವಯನಾಡ್ ಭೂಕುಸಿತ ಸಂತ್ರಸ್ತರ ಪುನರ್ವಸತಿಗೆ ಅನುದಾನ ಮಂಜೂರು ಮಾಡಲು ನಿರಾಕರಿಸಿದ್ದ ಕೇಂದ್ರ ಸರಕಾರ, ಅದರ ಬದಲು ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು ಯೋಜನೆಯಡಿ 529.50 ಕೋಟಿ ರೂ. ಬಡ್ಡಿರಹಿತ ಸಾಲವನ್ನು ಮಂಜೂರು ಮಾಡಿತ್ತು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, “ನೈಸರ್ಗಿಕ ವಿಕೋಪ ಪೀಡಿತ ಜನರ ಬೆನ್ನಿಗೆ ಮೋದಿ ಸರಕಾರ ಕಲ್ಲುಬಂಡೆಯಂತೆ ನಿಂತಿದೆ. ಇಂದು ಗೃಹ ವ್ಯವಹಾರಗಳ ಸಚಿವಾಲಯವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ ಆಂಧ್ರಪ್ರದೇಶ, ನಾಗಾಲ್ಯಾಂಡ್, ಒಡಿಶಾ, ತೆಲಂಗಾಣ ಹಾಗೂ ತ್ರಿಪುರಾಗಳಿಗೆ 1,554.99 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ. ಇದು ಕೇಂದ್ರ ಸರಕಾರವು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ 27 ರಾಜ್ಯಗಳಿಗೆ ಬಿಡುಗಡೆ ಮಾಡಿದ್ದ 18,322.80 ಕೋಟಿ ರೂ.ನೊಂದಿಗೆ ಬಿಡುಗಡೆ ಮಾಡಿರುವ ಹೆಚ್ಚುವರಿ ಅನುದಾನವಾಗಿದೆ” ಎಂದು ಹೇಳಿದ್ದಾರೆ.







