ಚಂಡಿಗಡ ಆಡಳಿತ ಕುರಿತು ಮಸೂದೆ ಮಂಡಿಸುವ ಉದ್ದೇಶವಿಲ್ಲ: ವಿವಾದದ ಬಳಿಕ ಕೇಂದ್ರ ಸರಕಾರ ಸ್ಪಷ್ಟನೆ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚಂಡಿಗಡದ ಆಡಳಿತ ಕುರಿತು ಯಾವುದೇ ಮಸೂದೆಯನ್ನು ಮಂಡಿಸುವ ಉದ್ದೇಶವನ್ನು ಕೇಂದ್ರ ಸರಕಾರವು ಹೊಂದಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯವು ರವಿವಾರ ತಿಳಿಸಿದೆ.
ಚಂಡಿಗಡಕ್ಕಾಗಿ ಕೇಂದ್ರದ ಕಾನೂನು ರಚನೆ ಪ್ರಕ್ರಿಯೆಯನ್ನು ಸರಳಗೊಳಿಸುವುದಷ್ಟೇ ಪ್ರಸ್ತಾವದ ಉದ್ದೇಶವಾಗಿದೆ ಮತ್ತು ಅದಿನ್ನೂ ಸರಕಾರದ ಪರಿಶೀಲನೆಯಲ್ಲಿದೆ. ಪ್ರಸ್ತಾವದ ಕುರಿತು ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ ಎಂದು ಸಚಿವಾಲಯವು ಹೇಳಿದೆ.
ಪಂಜಾಬಿನ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರವು, ಚಂಡಿಗಡದ ಆಡಳಿತ ಅಥವಾ ಆಡಳಿತ ಸ್ವರೂಪವನ್ನು ಬದಲಿಸಲು ತಾನು ಬಯಸಿಲ್ಲ. ಚಂಡಿಗಡ ಹಾಗೂ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ನಡುವಿನ ಸಾಂಪ್ರದಾಯಿಕ ವ್ಯವಸ್ಥೆಗಳನ್ನು ಬದಲಿಸುವ ಉದ್ದೇಶವನ್ನೂ ತಾನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದು ಕಳವಳಗೊಳ್ಳಬೇಕಾದ ವಿಷಯವಲ್ಲ ಎಂದು ತಳ್ಳಿ ಹಾಕಿರುವ ಕೇಂದ್ರವು, ಸಂಬಂಧಿಸಿದ ಎಲ್ಲರೊಂದಿಗೆ ಸಮಾಲೋಚಿಸಿದ ಬಳಿಕವೇ ಚಂಡಿಗಡದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾವದ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ತಿಳಿಸಿದೆ.
ಏನಿದು ಸಂವಿಧಾನ (131ನೇ ತಿದ್ದುಪಡಿ) ಮಸೂದೆ,2025?
ಹಲವಾರು ವರದಿಗಳ ಪ್ರಕಾರ ಸದ್ರಿ ಮಸೂದೆಯು ಚಂಡಿಗಡವನ್ನು ಸಂವಿಧಾನದ 240ನೇ ವಿಧಿಯಡಿ ತಮ್ಮದೇ ಆದ ಶಾಸಕಾಂಗಗಳನ್ನು ಹೊಂದಿರದ ಇತರ ಕೇಂದ್ರಾಡಳಿತ ಪ್ರದೇಶಗಳ ಗುಂಪಿಗೆ ಸೇರಿಸಲು ಬಯಸಿದೆ, ಇದು ಚಂಡಿಗಡಕ್ಕಾಗಿ ನಿಯಮಗಳನ್ನು ರೂಪಿಸಲು ರಾಷ್ಟ್ರಪತಿಗಳಿಗೆ ಅಧಿಕಾರ ನೀಡುತ್ತದೆ.
ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು, ಪುದುಚೇರಿ ಪ್ರಸ್ತುತ 240ನೇ ವಿಧಿಯಡಿಯಿವೆ.
ಪ್ರಸ್ತುತ ಪಂಜಾಬಿನ ರಾಜ್ಯಪಾಲರು ಚಂಡಿಗಡದ ಆಡಳಿತಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ ಎಂಬ ವರದಿಗಳು ಪಂಜಾಬಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು,ಹಲವಾರು ರಾಜಕಾರಣಿಗಳು ಇದನ್ನು ಚಂಡಿಗಡವನ್ನು ಪಂಜಾಬಿನಿಂದ ಕಿತ್ತುಕೊಳ್ಳುವ ಪ್ರಯತ್ನವಾಗಿದೆ ಎಂದು ಬಣ್ಣಿಸಿದ್ದಾರೆ.







