97 ತೇಜಸ್ ವಿಮಾನಗಳ ಖರೀದಿಗಾಗಿ ಎಚ್ಎಎಲ್ ಜೊತೆಗೆ 62,370 ಕೋ.ರೂ.ಗಳ ಒಪ್ಪಂದ

Photo Credit : ndtv
ಹೊಸದಿಲ್ಲಿ,ಸೆ.25: ರಕ್ಷಣಾ ಸಚಿವಾಲಯವು 97 ತೇಜಸ್ Mk1A ಲಘು ಯುದ್ಧವಿಮಾನಗಳ ಖರೀದಿಗಾಗಿ ಗುರುವಾರ ಹಿಂದುಸ್ಥಾನ ಏರೋನಾಟಿಕ್ಸ್ ಲಿ.(ಎಚ್ಎಎಲ್) ಜೊತೆ 62,370 ಕೋ.ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಇವುಗಳಲ್ಲಿ ಸಂಬಂಧಿತ ಉಪಕರಣಗಳೊಂದಿಗೆ 68 ಫೈಟರ್ಗಳು ಮತ್ತು 29 ಅವಳಿ ಆಸನಗಳ ತರಬೇತಿ ವಿಮಾನಗಳು ಸೇರಿವೆ.
2027-28ರಲ್ಲಿ ಈ ವಿಮಾನಗಳ ಪೂರೈಕೆ ಆರಂಭಗೊಳ್ಳಲಿದ್ದು,ಆರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ. ಈ ವಿಮಾನಗಳು ಶೇ.64ರಷ್ಟು ದೇಶಿ ನಿರ್ಮಿತ ಬಿಡಿಭಾಗಗಳನ್ನು ಒಳಗೊಂಡಿರಲಿವೆ ಮತ್ತು ಜ.2021ರಲ್ಲಿ ಸಹಿ ಮಾಡಲಾಗಿದ್ದ ಹಿಂದಿನ ತೇಜಸ್ Mk1A ಒಪ್ಪಂದಕ್ಕೆ ಹೋಲಿಸಿದರೆ 67 ಹೆಚ್ಚುವರಿ ಸಾಧನಗಳನ್ನು ಹೊಂದಿರಲಿವೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.
ಈ ವಿಮಾನಗಳಲ್ಲಿ ‘ಉತ್ತಮ್’ ಆ್ಯಕ್ಟಿವ್ ಇಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೆ(ಎಇಎಸ್ಎ) ರಾಡಾರ್, ಸ್ವಯಂ ರಕ್ಷಾ ಕವಚ್ ಮತ್ತು ಕಂಟ್ರೋಲ್ ಸರ್ಫೇಸ್ ಆ್ಯಕ್ಚುವೇಟರ್ಸ್ನಂತಹ ಅತ್ಯಾಧುನಿಕ ದೇಶಿಯವಾಗಿ ಅಭಿವೃದ್ಧಿಗೊಳಿಸಲಾದ ವ್ಯವಸ್ಥೆಗಳ ಏಕೀಕರಣವು ಆತ್ಮನಿರ್ಭರತಾ ಉಪಕ್ರಮಗಳಿಗೆ ಇನ್ನಷ್ಟು ಬಲ ನೀಡಲಿದೆ. ಸುಮಾರು 105 ಭಾರತೀಯ ಕಂಪೆನಿಗಳು ಈ ವಿಮಾನಗಳ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿಕೊಳ್ಳಲಿದ್ದು, ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಸಚಿವಾಲಯವು ಹೇಳಿದೆ.
ಎಚ್ಎಎಲ್ ಇತ್ತೀಚಿಗೆ ತೇಜಸ್ Mk1A ಯುದ್ಧವಿಮಾನಗಳಿಗಾಗಿ ಮೂರನೇ ಜಿಇ-404 ಇಂಜಿನ್ ಅನ್ನು ಪಡೆದುಕೊಂಡಿದ್ದು, ಇನ್ನೊಂದು ಇಂಜಿನ್ ಶೀಘ್ರವೇ ಪೂರೈಕೆಯಾಗುವ ನಿರೀಕ್ಷೆಯಿದೆ.
ಎಚ್ಎಎಲ್ನ ನಾಸಿಕ್ ವಿಭಾಗವು 1,188 ತಾಂತ್ರಿಕ ತಜ್ಞರು, ತಾಂತ್ರಿಕ ಬೆಂಬಲಕ್ಕಾಗಿ 624 ತಜ್ಞರು ಮತ್ತು 395 ಇಂಜಿನಿಯರ್ಗಳು ಸೇರಿದಂತೆ ಒಟ್ಟು 2,207 ಉದ್ಯೋಗಿಗಳನ್ನು ಹೊಂದಿದೆ.







