ಜಲ ಜೀವನ ಮಿಷನ್ ಅಡಿ ದಂಡ ವಿಧಿಸಲ್ಪಟ್ಟ ಗುತ್ತಿಗೆದಾರರು, ಏಜನ್ಸಿಗಳ ಮಾಹಿತಿ ಕೇಳಿದ ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಜಲ ಜೀವನ ಮಿಷನ್(ಜೆಜೆಎಂ) ಅಡಿ ದಂಡ ವಿಧಿಸಲಾದ ಗುತ್ತಿಗೆದಾರರು ಮತ್ತು ಬಾಹ್ಯ ತಪಾಸಣಾ ಸಂಸ್ಥೆಗಳ ವಿವರಗಳನ್ನು ಸಲ್ಲಿಸುವಂತೆ ಕೇಂದ್ರವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಜೆಜೆಎಂ ಅಡಿ ಅಕ್ರಮಗಳಿಗಾಗಿ ದಂಡ ವಿಧಿಸಲಾಗಿರುವ, ಕಪ್ಪುಪಟ್ಟಿಗೆ ಸೇರಿಸಲು ಆದೇಶಗಳನ್ನು ಹೊರಡಿಸಲಾಗಿರುವ ಅಥವಾ ಹಣವನ್ನು ಮರುವಸೂಲಿ ಮಾಡಲಾಗಿರುವ ಗುತ್ತಿಗೆದಾರರು ಮತ್ತು ತಪಾಸಣಾ ಏಜೆನ್ಸಿಗಳನ್ನು ಪಟ್ಟಿಯಲ್ಲಿ ಸೇರಿಸಲಾಗುವುದು.
ಕಳಪೆ ಕಾಮಗಾರಿ ಅಥವಾ ಹಣ ದುರುಪಯೋಗದ ದೂರುಗಳಿಗೆ ಸಂಬಂಧಿಸಿದ ಅಮಾನತುಗಳು, ವಜಾಗೊಳಿಸುವಿಕೆಗಳು ಮತ್ತು ಎಫ್ಐಆರ್ ದಾಖಲು ಸೇರಿದಂತೆ ಜನಾರೋಗ್ಯ ಇಂಜಿನಿಯರಿಂಗ್ ಇಲಾಖೆಗಳ(ಪಿಎಚ್ಇಡಿ) ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಮಾಹಿತಿಗಳನ್ನು ಸಲ್ಲಿಸುವಂತೆಯೂ ಜಲಶಕ್ತಿ ಸಚಿವಾಲಯದ ಅಧೀನದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು (ಡಿಡಿಡಬ್ಲ್ಯುಎಸ್) ಸೂಚಿಸಿದೆ.
ಅಧಿಕಾರಿಗಳ ಪ್ರಕಾರ ಉನ್ನತ ಮಟ್ಟದ ಜೆಜೆಎಂ ಪುನರ್ಪರಿಶೀಲನಾ ಸಭೆಯ ಬಳಿಕ ಈ ನಿರ್ದೇಶನವನ್ನು ಹೊರಡಿಸಲಾಗಿದೆ. ಸಭೆಯಲ್ಲಿ ಯೋಜನೆಯ ಗಡುವನ್ನು 2028ರವರೆಗೆ ವಿಸ್ತರಿಸುವ ಬಗ್ಗೆ ಸರಕಾರವು ಚರ್ಚಿಸಿದೆ.







