ಕೇಂದ್ರದಿಂದ ‘ಲೋಕಶಾಹಿ ಮರಾಠಿ’ ಚಾನೆಲ್ ಗೆ 30 ದಿನಗಳ ಅಮಾನತು
ಹೊಸದಿಲ್ಲಿ : ಮರಾಠಿ ಸುದ್ದಿ ಚಾನೆಲ್ ‘ಲೋಕಶಾಹಿ ಮರಾಠಿ’ಯ ಪರವಾನಿಗೆಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ 30 ದಿನಗಳ ಕಾಲ ಅಮಾನತಿನಲ್ಲಿರಿಸಿದೆ ಎಂದು ಸುದ್ದಿವಾಹಿನಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಮಹಿಳೆಯೊಬ್ಬರೊಂದಿಗೆ ಇರುವ ಚಿತ್ರವೊಂದನ್ನು ವಾಹಿನಿಯು ಸೆಪ್ಟಂಬರ್ ನಲ್ಲಿ ಪ್ರಸಾರ ಮಾಡಿತ್ತು. ಅದರ ಬಳಿಕ, ಸಚಿವಾಲಯವು ಅದಕ್ಕೆ 72 ಗಂಟೆಗಳ ಅಮಾನತು ನೋಟಿಸನ್ನು ನೀಡಿತ್ತು.
ಅಮಾನತನ್ನು ವಾಹಿನಿಯು ದಿಲ್ಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. ನ್ಯಾಯಾಲಯವು 24 ಗಂಟೆಗಳಲ್ಲಿ ನೋಟಿಸನ್ನು ರದ್ದುಪಡಿಸಿತ್ತು.
ಚಾನೆಲ್ ತನ್ನದೇ ಆದ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಬೇಕು ಹಾಗೂ ತೃತೀಯ ಪಕ್ಷದಿಂದ ಪಡೆದುಕೊಳ್ಳಬಾರದು ಎಂಬ ಶರತ್ತಿನಲ್ಲಿ ಚಾನೆಲನ್ನು ಅಪ್ಲಿಂಕ್ ಮತ್ತು ಡೌನ್ಲಿಂಕ್ ಮಾಡುವ ಅನುಮತಿಯನ್ನು ರೆರಾ ಟ್ರೇಡರ್ಸ್ ಲಿಮಿಟೆಡ್ ಗೆ ನೀಡಲಾಗಿತ್ತು ಎಂದು ನೋಟಿಸಿನಲ್ಲಿ ಸಚಿವಾಲಯ ಹೇಳಿದೆ.
ಆದರೆ ಲೋಕಶಾಹಿ ಮರಾಠಿಯು ತನ್ನ ಕಾರ್ಯಕ್ರಮಗಳನ್ನು ಮುಂಬೈಯ ಅಂಧೇರಿ ಪ್ರದೇಶದಲ್ಲಿರುವ ಬ್ರಾಡ್ಕಾಸ್ಟ್ ಎಕ್ವಿಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಟೆಲಿಪೋರ್ಟ್ ಆಪರೇಟರ್ನ ಸ್ಟುಡಿಯೋದಿಂದ ಪಡೆಯುತ್ತಿರುವುದನ್ನು ತಾನು ಗಮನಿಸಿರುವುದಾಗಿ ಸಚಿವಾಲಯ ತಿಳಿಸಿದೆ.
ಇದು ಅಪ್ಲಿಂಕಿಂಗ್ ಮತ್ತು ಡೌನ್ಲಿಂಕಿಂಗ್ ನಿಯಮಗಲ 32ನೇ ವಿಧಿಗೆ ವಿರುದ್ಧವಾಗಿದೆ ಎಂದು ತನ್ನ ನೋಟಿಸ್ ನಲ್ಲಿ ಅದು ಹೇಳಿದೆ.
ಸಚಿವಾಲಯ ವಿಧಿಸಿರುವ ಅಮಾನತನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಸುದ್ದಿವಾಹಿನಿ ಹೇಳಿದೆ.