ಭಾರತ-ಮ್ಯಾನ್ಮಾರ್ ಗಡಿಗೆ ಬೇಲಿ ಅಳವಡಿಸಲಾಗುವುದು: ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ (PTI)
ಹೊಸದಿಲ್ಲಿ: ಮ್ಯಾನ್ಮಾರ್ನಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿನ ಅಲ್ಲಿನ ಸೈನಿಕರು ಗಡಿ ದಾಟಿ ಮಿಜೋರಾಂನಲ್ಲಿ ಆಶ್ರಯ ಪಡೆಯುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತ-ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ ಬೇಲಿ ಅಳವಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
“ಬಾಂಗ್ಲಾದೇಶದೊಂದಿಗಿನ ಗಡಿಯಂತೆ ಮ್ಯಾನ್ಮಾರ್ ಜೊತೆಗಿನ ಗಡಿಗೂ ಭದ್ರತೆ ಒದಗಿಸಲಾಗುವುದು,” ಎಂದು ಅಸ್ಸಾಂ ಪೊಲೀಸ್ ಕಮಾಂಡೋಗಳ ಪಾಸಿಂಗ್ ಔಟ್ ಪೆರೇಡಿನಲ್ಲಿ ಇಂದು ಭಾಗವಹಿಸಿದ ಅಮಿತ್ ಶಾ ಹೇಳಿದರು.
ಮ್ಯಾನ್ಮಾರ್ ಗಡಿ ಭಾಗದಲ್ಲಿ ಬೇಲಿ ಅಳವಡಿಸುವ ಮೂಲಕ ಭಾರತವು ಎರಡೂ ರಾಷ್ಟ್ರಗಳ ನಡುವೆ ಇದ್ದ ಫ್ರೀ ಮೂವ್ಮೆಂಟ್ ರಿಜೈಮ್ (ಎಫ್ಎಂಆರ್) ಅನ್ನು ರದ್ದುಗೊಳಿಸಲಿದೆ. ಈ ಎಫ್ಎಂಆರ್ ಅನ್ನು 1970ರಲ್ಲಿ ಜಾರಿಗೊಳಿಸಲಾಗಿತ್ತು. ಭಾರತ-ಮ್ಯಾನ್ಮಾರ್ ಗಡಿಗಳಲ್ಲಿ ವಾಸಿಸುವ ಜನರು ಪರಸ್ಪರ ಕೌಟುಂಬಿಕ ಮತ್ತು ಜನಾಂಗೀಯ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿತ್ತು.
ಮ್ಯಾನ್ಮಾರ್ನಲ್ಲಿ ಬಂಡುಕೋರ ಪಡೆಗಳು ಹಾಗೂ ಅಲ್ಲಿನ ಜುಂಟಾ ಆಡಳಿತದ ನಡುವೆ ಕಾದಾಟ ಮುಂದುವರಿದಿರುವಂತೆಯೇ ಮ್ಯಾನ್ಮಾರ್ನ ನೂರಾರು ಸೇನಾ ಸಿಬ್ಬಂದಿಗಳು ಭಾರತದತ್ತ ಪಲಾಯನಗೈಯ್ಯುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿ ಮ್ಯಾನ್ಮಾರ್ನ ಸೈನಿಕರನ್ನು ಅವರ ದೇಶಕ್ಕೆ ಕಳುಹಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಮ್ಯಾನ್ಮಾರ್ನಲ್ಲಿ ಕಾಳಗ ತೀವ್ರಗೊಳ್ಳುತ್ತಿರುವಂತೆಯೇ ಅಲ್ಲಿನ ಸುಮಾರು 600 ಸೈನಿಕರು ಭಾರತಕ್ಕೆ ಆಗಮಿಸಿದ್ಧಾರೆ ಹಾಗೂ ಮಿಜೋರಾಂನ ಲಾನ್ಗಟ್ಲೈ ಎಂಬಲ್ಲಿ ಅಸ್ಸಾಂ ರೈಫಲ್ಸ್ ಶಿಬಿರದಲ್ಲಿ ಆಶ್ರಯ ಪಡೆದಿದ್ಧಾರೆ.