ತೀರ್ಥಯಾತ್ರಿಕರನ್ನು ಗುರಿಯಿರಿಸಿ ಆನ್ಲೈನ್ ವಂಚನೆ ಬಗ್ಗೆ ಕೇಂದ್ರದ ಎಚ್ಚರಿಕೆ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಪ್ರವಾಸಿಗರನ್ನು ಅದರಲ್ಲೂ ವಿಶೇಷವಾಗಿ ಚಾರ್ಧಾಮ್ ತೀರ್ಥಯಾತ್ರಾರ್ಥಿಗಳನ್ನು ಗುರಿಯಿರಿಸಿ ನಡೆಸಲಾಗುತ್ತಿರುವ ಆನ್ಲೈನ್ ಬುಕಿಂಗ್ ವಂಚನೆಗಳ ಕುರಿತು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ಎಚ್ಚರಿಕೆ ನೀಡಿದೆ.
ಈ ವಂಚನೆಗಳನ್ನು ನಕಲಿ ವೆಬ್ ಸೈಟ್ ಗಳು, ವಂಚಕ ಸಾಮಾಜಿಕ ಜಾಲತಾಣ ಪೇಜ್ ಗಳು, ಫೇಸ್ಬುಕ್ ಪೋಸ್ಟ್ ಗಳು, ವಾಟ್ಸಾಪ್ ಖಾತೆಗಳು ಹಾಗೂ ಗೂಗಲ್ ನಂತಹ ಶೋಧ ಎಂಜಿನ್ ಗಳಲ್ಲಿ ಪಾವತಿಸಿದ ಜಾಹೀರಾತುಗಳ ಮೂಲಕ ನಡೆಸಲಾಗುತ್ತಿದೆಯೆಂದು ಕೇಂದ್ರ ಗೃಹ ಸಚಿವಾಲಯದ ಅಧೀನ ಸಂಸ್ಥೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕೇದಾರ್ ನಾಥ್ ಗೆ ಪ್ರಯಾಣಿಸಲು ಹೆಲಿಕಾಪ್ಟರ್ ಬುಕಿಂಗ್, ಚಾರ್ ಧಾಮ್ ಯಾತ್ರಿಕರಿಗೆ ಅತಿಥಿಗೃಹ ಹಾಗೂ ಹೋಟೆಲ್ ಬುಕಿಂಗ್ ವ್ಯವಸ್ಥೆ, ಆನ್ ಲೈನ್ ಕ್ಯಾಬ್ ಅಥವಾ ಟ್ಯಾಕ್ಸಿ ಕಾದಿರಿಸುವಿಕೆ, ರಜಾದಿನದ ಪ್ಯಾಕೇಜ್ ಗಳು, ಧಾರ್ಮಿಕ ಪ್ರವಾಸ ಇತ್ಯಾದಿ ಸೇವೆಗಳ ಹೆಸರಿನಲ್ಲಿ ಯಾತ್ರಿಕರನ್ನು ವಂಚಿಸಲಾಗುತ್ತಿದೆಯೆಂದು ಅದು ಹೇಳಿದೆ.
ಅಮಾಯಕಕ ವ್ಯಕ್ತಿಗಳು ಇಂತಹ ಜಾಲತಾಣಗಳ ಮೂಲಕ ಪಾವತಿಗಳನ್ನು ಮಾಡುತ್ತಾರೆ. ಆದರೆ ಯಾವುದೇ ದೃಢೀಕರಣ ಬಾರದೆ ಇದ್ದಾಗ ಅಥವಾ ಸೇವೆಯನ್ನು ಪಡೆಯದೇ ಇದ್ದಾಗ ಮತ್ತು ದೂರವಾಣಿ ಸಂಪರ್ಕ ಸಂಖ್ಯೆಗಳು ಅನ್ ರಿಚೇಬಲ್ ಆದಾಗ ಅವರಿಗೆ ತಾವು ವಂಚನೆಗೊಳಗಾಗಿರುವುದು ಅರಿವಾಗುತ್ತದೆ. ಹೀಗಾಗಿ ಈ ಬಗ್ಗೆ ಜನರು ಅತ್ಯಂತ ಕಟ್ಟೆಚ್ಚರವನ್ನು ವಹಿಸಬೇಕು ಎಂದು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪಾವತಿಗಳನ್ನು ಮಾಡುವ ಮುನ್ನ ವೆಬ್ಸೈಟ್ಗಳ ಸಾಚಾತನವನ್ನು ಯಾವಾಗಲೂ ದೃಢಪಡಿಸಿಕೊಳ್ಳಬೇಕು. ಗೂಗಲ್, ಫೇಸ್ಬುಕ್ ಅಥವಾ ವಾಟ್ಸಾಪ್ನಲ್ಲಿರುವ ಪ್ರಾಯೋಜಿತ ಅಥವಾ ಅಜ್ಞಾತ ಲಿಂಕ್ಗಳಿಗೆ ಕ್ಲಿಕ್ ಮಾಡುವ ಮುನ್ನ ದೃಢೀಕರಿಸಿಕೊಳ್ಳಬೇಕು ಅಧಿಕೃತ ಸರಕಾರಿ ವೆಬ್ಸೈಟ್ಗಳು ಅಥವಾ ವಿಶ್ವಸನೀಯ ಟ್ರಾವೆಲ್ ಏಜೆನ್ಸಿಗಳಲ್ಲಿ ಮಾತ್ರವೇ ಬುಕಿಂಗ್ ಗಳನ್ನು ನಡೆಸಿರುವುದನ್ನು ಖಾತರಿಪಡಿಸಿಕೊಳ್ಳಬೇಕೆಂದು ಅದು ತಿಳಿಸಿದೆ.
ಇಂತಹ ಯಾವುದೇ ವಂಚನೆಯ ಪ್ರಕರಣಗಳು ಪತ್ತೆಯಾದಲ್ಲಿ ರಾಷ್ಟ್ರೀಯ ಸೈಬರ್ ಕ್ರೈಂ ದೂರು ಜಾಲತಾಣದಲ್ಲಿ ದೂರು ನೀಡಬೇಕು ಅಥವಾ 1930 ದೂರವಾಣಿ ಸಂಖ್ಯೆಗೆ ತಕ್ಷಣವೇ ಕರೆ ಮಾಡಬೇಕೆಂದು ಸಚಿವಾಲಯ ಆಗ್ರಹಿಸಿದೆ.







