ಸಂಸತ್ತಿಗೆ ಗೈರಾಗಿದ್ದರೂ ಅಮಾನತುಗೊಂಡ ಡಿಎಂಕೆ ಸಂಸದ
ಸಿಬ್ಬಂದಿಯ ಪ್ರಮಾದ ಎಂದು ಕಾರಣ ನೀಡಿದ ಪ್ರಹ್ಲಾದ್ ಜೋಷಿ

ಎಸ್ ಆರ್ ಪಾರ್ಥಿಬನ್ (Photo:X)
ಹೊಸದಿಲ್ಲಿ: ಬುಧವಾರ ಲೋಕಸಭೆಯಲ್ಲಿ ಉಂಟಾದ ಭದ್ರತಾ ವೈಫಲ್ಯ ಕುರಿತಂತೆ ಗುರುವಾರ ಸದನದಲ್ಲಿ ಗೃಹ ಸಚಿವರ ಹೇಳಿಕೆಗೆ ಆಗ್ರಹಿಸಿ ಪ್ರತಿಭಟಿಸಿದ್ದಕ್ಕಾಗಿ ಅಶಿಸ್ತಿನ ನಡವಳಿಕೆ ಆರೋಪ ಹೊರಿಸಿ ಅಮಾನತುಗೊಂಡ 14 ಸಂಸದರಲ್ಲಿ ಡಿಎಂಕೆಯ ಸಂಸದ ಎಸ್ ಆರ್ ಪಾರ್ಥಿಬನ್ ಕೂಡ ಸೇರಿದ್ದರು. ಆದರೆ ಅಚ್ಚರಿಯೆಂದರೆ ಈ ವಿದ್ಯಮಾನ ನಡೆದ ದಿನ, ಅಂದರೆ ಗುರುವಾರದಂದು ಅವರು ಸಂಸತ್ತಿನಲ್ಲಿರಲೇ ಇಲ್ಲ.
ತಾವು ದಿಲ್ಲಿಯಲ್ಲಿಯೇ ಇದ್ದರೂ ಗುರುವಾರದ ಕಲಾಪಕ್ಕೆ ಅಸೌಖ್ಯದಿಂದಾಗಿ ಹಾಜರಾಗಿರಲಿಲ್ಲ ಎಂದು ಪಾರ್ಥಿಬನ್ ಹೇಳಿದ್ದಾರೆ.
ಅಮಾನತುಗೊಂಡ ಸಂಸದರ ಹೆಸರುಗಳನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಗುರುವಾರ ಲೋಕಸಭೆಯಲ್ಲಿ ಓದಿ ಹೇಳಿದ್ದರು.
ನಂತರ ಸ್ಪಷ್ಟೀಕರಣ ನೀಡಿದ ಜೋಷಿ ಈ ಪಟ್ಟಿಯಿಂದ ಪಾರ್ತಿಬನ್ ಅವರ ಹೆಸರು ತೆಗೆದುಹಾಕಿದ್ದರು.
“ಹೊಸ ಸಂಸತ್ ಕಟ್ಟದಲ್ಲಿ ಭಿತ್ತಿಪತ್ರ, ಪೋಸ್ಟರ್ಗಳನ್ನು ತೋರಿಸುವ ಹಾಗಿಲ್ಲ ಎಂಬ ನಿಯಮವಿದೆ. ಅದನ್ನು ಉಲ್ಲಂಘಿಸಿದ ಸಂಸದರನ್ನು ಸ್ಪೀಕರ್ ನಿರ್ಧಾರಂತೆ ಅಮಾನತುಗೊಳಿಸಲಾಗಿದೆ. ಆದರೆ ಒಬ್ಬ ಸಂಸದರು ಉಪಸ್ಥಿತರಿಲ್ಲದೇ ಇದ್ದರೂ ಅವರನ್ನೂ ಅಮಾನತುಗೊಳಿಸಲಾಗಿತ್ತು. ಅವರ ಹೆಸರು ಕೈಬಿಡಲಾಗಿದೆ. ಸಿಬ್ಬಂದಿಯ ಪ್ರಮಾದದಿಂದ ಹೀಗಾಗಿದೆ,” ಎಂದು ನಂತರ ಜೋಷಿ ಹೇಳಿದ್ದರು.







