5 ಬೆಳೆಗಳಿಗೆ ಬೆಂಬಲ ಬೆಲೆ ಎಂಬ ಕೇಂದ್ರದ ಪ್ರಸ್ತಾವ ಖಾಯಂ ಪರಿಹಾರವಲ್ಲ: ತಜ್ಞರ ಅಭಿಮತ

Photo: PTI
ಚಂಡೀಗಢ/ ಬಟಿಂಡಾ: ಕಾನೂನಾತ್ಮಕ ಚೌಕಟ್ಟಿನಡಿ ಐದು ಬೆಳೆಗಳನ್ನು ಬೆಂಬಲಬೆಲೆಯಲ್ಲಿ ಖರೀದಿಸುವ ಸಂಬಂಧ ಕೇಂದ್ರ ಸರ್ಕಾರ ಮುಂದಿಟ್ಟಿರುವ ಪ್ರಸ್ತಾವ ರೈತರ ಸಮಸ್ಯೆಗೆ ಖಾಯಂ ಪರಿಹಾರವಲ್ಲ ಎಂದು ಕೃಷಿ ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದು ಪರ್ಯಾಯ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡುವ ಕ್ರಮ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ಇದು ಸಮಸ್ಯೆಯನ್ನು ತಾತ್ಕಾಲಿಕವಾಗಿ ಶಮನಗೊಳಿಸುವ ಕ್ರಮ ಎಂದು ಬಹುತೇಕ ಮಂದಿ ಹೇಳಿದ್ದಾರೆ. ಧೀರ್ಘಾವಧಿ ಪರಿಹಾರವಾಗಿ ಇದು ಎಷ್ಟು ಪರಿಣಾಮಕಾರಿಯಾಗಲು ಸಾಧ್ಯ ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ರೈತ ಮುಖಂಡರ ಜತೆಗಿನ ಭಾನುವಾರದ ಮಾತುಕತೆಯಲ್ಲಿ ಕೇಂದ್ರ ಸರ್ಕಾರ ಹತ್ತಿ, ಮೆಕ್ಕೆಜೋಳ, ತೊಗರಿ, ಮಸೂರು ಮತ್ತು ಉದ್ದನ್ನು ರಾಷ್ಟ್ರೀಯ ಸಹಕಾರ ಗ್ರಾಹಕರ ಫೆಡರೇಷನ್ (ಎನ್ಸಿಸಿಎಫ್), ನ್ಯಾಷನಲ್ ಅಗ್ರಿಕಲ್ಚರಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ (ನಫೆಡ್) ಮತ್ತು ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ (ಸಿಸಿಐ) ಮೂಲಕ ಐದು ವರ್ಷಗಳ ಅವಧಿಗೆ ಖರೀದಿ ಮಾಡುವ ಪ್ರಸ್ತಾವವನ್ನು ಮುಂದಿಟ್ಟಿತ್ತು.
ಈ ಪ್ರಸ್ತಾವ ರೈತರ ಸಮಸ್ಯೆಗಳಿಗೆ ಸಮಗ್ರ ಪರಿಹಾರವನ್ನು ಒದಗಿಸುವುದಿಲ್ಲ ಎಂದು ಅರ್ಥಶಾಸ್ತ್ರಜ್ಞ ಸುಚಾ ಸಿಂಗ್ ಗಿಲ್ ಟೀಕಿಸಿದ್ದಾರೆ. ಎಲ್ಲ 23 ಬೆಳೆಗಳಿಗೆ ನ್ಯಾಯಸಮ್ಮತ ಬೆಲೆಯನ್ನು ರಾಷ್ಟ್ರವ್ಯಾಪಿಯಾಗಿ ಲೆಕ್ಕಾಚಾರ ಮಾಡುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಆದರೆ ಸಿಆರ್ಆರ್ಐಡಿ ತಜ್ಞ ಸತೀಶ್ ವರ್ಮಾ ಇದನ್ನು ಸ್ವಾಗತಿಸಿದ್ದು, ಇದು ಬೆಳೆಯ ವೈವಿಧ್ಯೀಕರಣ ಮತ್ತು ಪರ್ಯಾಯ ಬೆಳೆಗಳನ್ನು ಬೆಳೆಯಲು ರೈತರಿಗೆ ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ.
ಇದು ಗುತ್ತಿಗೆ ಕೃಷಿಯನ್ನು ಹೋಲುವಂಥದ್ದು ಎಂದು ಖ್ಯಾತ ಕೃಷಿ ಅರ್ಥಶಾಸ್ತ್ರಜ್ಞ ಸರ್ದಾರ ಸಿಂಗ್ ಜೋಲ್ ಹೇಳಿದ್ದಾರೆ. ಕೃಷಿ ನೀತಿ ತಜ್ಞ ದೇವೇಂದ್ರ ಶರ್ಮಾ ಕೂಡಾ ಈ ಪ್ರಸ್ತಾವದ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಮುಂದಿಟ್ಟಿರುವ ಐದು ವರ್ಷದ ಪ್ರಸ್ತಾವದ ಬಳಿಕ ಮುಂದೇನು ಎಂದು ಅರ್ಥಶಾಸ್ತ್ರಜ್ಞ ರಂಜಿತ್ ಸಿಂಗ್ ಘುಮಾನ್ ಪ್ರಶ್ನಿಸಿದ್ದಾರೆ.







