ಸಚಿವ ಸಂಪುಟ ಸೇರಿದ ಹೇಮಂತ್ ಸೊರೇನ್ ಸಹೋದರ

ಬಸಂತ್ ಸೊರೇನ್ (PC: twitter.com/BasantSorenMLA)
ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ವಾರಗಳ ಬಳಿಕ ಚಂಪೈ ಸೊರೇನ್, ಸೆರೆಮನೆ ವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಸಹೋದರ ಬಸಂತ್ ಸೊರೇನ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಇತರ ಏಳು ಮಂದಿ ಶಾಸಕರು ಕೂಡಾ ಸಚಿವರಾಗಿ ಸಂಪುಟ ಸೇರಿದ್ದಾರೆ.
ಇದೀಗ ಹೊಸ ಸಂಪುಟ ಮುಖ್ಯಮಂತ್ರಿ ಸೇರಿ 11 ಸಚಿವರನ್ನು ಹೊಂದಿದ್ದು, ಒಂದು ಸ್ಥಾನ ಬಾಕಿ ಇದೆ. ಭವಿಷ್ಯದಲ್ಲಿ ಸೇರಿಸಿಕೊಳ್ಳುವ ಸಲುವಾಗಿ ಹಿಂದಿನ ಹೇಮಂತ್ ಸೊರೇನ್ ಸಂಪುಟದಲ್ಲಿ ಕೂಡಾ ಒಂದು ಸ್ಥಾನ ಖಾಲಿ ಇಡಲಾಗಿತ್ತು. ಚಂಪೈ ಸೊರೇನ್ ಅವರು ಫೆಬ್ರವರಿ 2ರಂದು ಒಬ್ಬ ಕಾಂಗ್ರೆಸ್ ಶಾಸಕ ಹಾಗೂ ಒಬ್ಬ ಆರ್ಜೆಡಿ ಶಾಸಕನ ಜತೆ ಸಂಪುಟ ರಚಿಸಿಕೊಂಡಿದ್ದರು.
2019ರ ಚುನಾವಣೆ ನಡೆದ ಬಳಿಕ ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಮಹಾಘಟಬಂಧನ ಸರ್ಕಾರ 7:4:1 ಸೂತ್ರವನ್ನು ಅಳವಡಿಸಿಕೊಂಡಿತ್ತು. ಜೆಎಂಎಂ ಪಕ್ಷದ ಲತೇಹಾರ್ ಶಾಸಕ ಬೈದ್ಯನಾಥ್ ರಾಮ್ ಅವರನ್ನು ಸಂಪುಟಕ್ಕೆ ಸೇರಿಸುವ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚಂಪೈ ಸೊರೇನ್ ಕೊನೆ ಕ್ಷಣದಲ್ಲಿ ಅವರನ್ನು ಕೈಬಿಟ್ಟಿದ್ದಾರೆ. ಈ ಮೂಲಕ 12ನೇ ಸ್ಥಾನ ಭರ್ತಿ ಮಾಡಲು ಸಾಧ್ಯವಾಗಿಲ್ಲ. 81 ಸದಸ್ಯರ ಸದನದಲ್ಲಿ ಆರ್ಜೆಡಿ ಏಕೈಕ ಶಾಸಕರನ್ನು ಹೊಂದಿದೆ. ಹೇಮಂತ್ ಸೊರೇನ್ ಸಂಪುಟದಲ್ಲಿ ಕೂಡಾ ಈ ಖಾಲಿ ಹುದ್ದೆಯ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿತ್ತು.







