ಸಂಸತ್ತಿನ ವಿಶೇಷ ಅಧಿವೇಶನದ ಸಾಧ್ಯತೆ ಕ್ಷೀಣ

PC : PTI
ಹೊಸದಿಲ್ಲಿ: ಪಹಾಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಅನಂತರ ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಪ್ರತಿಪಕ್ಷ ಆಗ್ರಹಿಸಿದ ಹೊರತಾಗಿಯೂ ಕೇಂದ್ರ ಸರಕಾರ ವಿಶೇಷ ಅಧಿವೇಶನ ನಡೆಸುವ ಸಾಧ್ಯತೆ ಇಲ್ಲ.
ಪ್ರತಿಪಕ್ಷದ ಪ್ರತಿಪಾದನೆಯಂತೆ ವಿಶೇಷ ಅಧಿವೇಶನ ಅಗತ್ಯವಿಲ್ಲ ಎಂದು ಸರಕಾರ ಭಾವಿಸಿದೆ ಎಂದು ಬಿಜೆಪಿಯ ಆಂತರಿಕ ಮೂಲಗಳು ತಿಳಿಸಿವೆ.
ಸರ್ವ ಪಕ್ಷಗಳ ಸಭೆಯಲ್ಲಿ ಪಹಲ್ಗಾಮ್ ದಾಳಿಯ ಕುರಿತು ಎಲ್ಲಾ ಅಗತ್ಯದ ವಿವರಗಳನ್ನು ಸರಕಾರ ಹಂಚಿಕೊಂಡಿದೆ. ಆಪರೇಷನ್ ಸಿಂಧೂರದ ಕುರಿತು ಕೂಡ ಮಾಹಿತಿಯನ್ನು ಸೂಕ್ತ ಮಾರ್ಗದ ಮೂಲಕ ನಿರಂತರವಾಗಿ ಹಂಚಿಕೊಂಡಿದೆ. ಆದುದರಿಂದ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವುದರಲ್ಲಿ ಯಾವುದೇ ತಾರ್ಕಿಕತೆ ಕಾಣುತ್ತಿಲ್ಲ. ‘‘ಇಂತಹ ಅತಿ ಸೂಕ್ಷ್ಮ ವಿಷಯಗಳನ್ನು ಸಂಸತ್ತಿನಲ್ಲಿ ಚರ್ಚಿಸುವುದು ಸೂಕ್ತವಲ್ಲ’’ ಎಂದು ಎನ್ಸಿಪಿಯ ಹಿರಿಯ ನಾಯಕ ಶರದ್ ಪವಾರ್ ಅವರು ನೀಡಿದ ಹೇಳಿಕೆಯನ್ನು ನೀವು ಕೇಳಿರಬಹುದು’’ ಎಂದು ಬಿಜೆಪಿಯ ಹಿರಿಯ ನಾಯಕರು ತಿಳಿಸಿದ್ದಾರೆ.
‘‘ಜೂನ್ ಮಧ್ಯೆ ಅಥವಾ ಜುಲೈ ಮೊದಲ ವಾರದಲ್ಲಿ ನಡೆಯಲಿರುವ ಮುಂದಿನ ಮುಂಗಾರು ಅಧಿವೇಶನದ ಸಂದರ್ಭ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಚರ್ಚಿಸಲು ಗರಿಷ್ಠ ಸಮಯ ನೀಡಲಾಗುವುದು’’ ಎಂದು ಅವರು ಹೇಳಿದ್ದಾರೆ.
ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರದ ಕುರಿತು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಸೂಚಿಸಿದ ಕಾಂಗ್ರೆಸ್ ಅನ್ನು ಅವರು ಟೀಕಿಸಿದ್ದಾರೆ. ಸರಕಾರದ ಭಯೋತ್ಪಾದನೆ ವಿರೋಧಿ ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸಿದ ಹೊರತಾಗಿಯೂ ವಿಶೇಷ ಅಧಿವೇಶನ ಕರೆಯುವಂತೆ ಕಾಂಗ್ರೆಸ್ ಆಗ್ರಹಿಸಿದೆ ಎಂದು ಅವರು ಹೇಳಿದ್ದಾರೆ.







