ಹಿರಿಯ ಕಾರ್ಮಿಕ ನಾಯಕ ಚಂದ್ರಶೇಖರ್ ಭೋಸ್ ನಿಧನ

ಚಂದ್ರಶೇಖರ್ ಬೋಸ್ |Photo Credit : Credit: X/@aiiea1951
ಕೋಲ್ಕತಾ,ಜ.16: ಕಾರ್ಮಿಕ ಒಕ್ಕೂಟದ ಹಿರಿಯ ನಾಯಕ ಹಾಗೂ ಸಿಪಿಎಂನ ಹಿರಿಯ ಸದಸ್ಯ ಚಂದ್ರಶೇಖರ್ ಬೋಸ್ ಅವರು ಶುಕ್ರವಾರ ಮುಂಜಾನೆ ಬಿಧಾನ್ ನಗರದಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ. ಅವರಿಗೆ 103 ವರ್ಷ ವಯಸ್ಸಾಗಿತ್ತು.
ವಿಮಾ ಉದ್ಯೋಗಿಗಳ ಚಳವಳಿಯ ಮುಂಚೂಣಿ ನಾಯಕರಾಗಿದ್ದ ಬೋಸ್ ಅವರು ಅಖಿಲ ಭಾರತ ವಿಮಾ ಉದ್ಯೋಗಿಗಳ ಸಂಘ (ಎಐಐಇಎ)ದ ಮಾಜಿ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಸಿಪಿಎಂ ಪಕ್ಷದ ಅತ್ಯಂತ ಹಿರಿಯ ಸದಸ್ಯರೂ ಆಗಿದ್ದರು. ಅವರು ಪುತ್ರ, ಸೊಸೆ ಹಾಗೂ ಮೊಮ್ಮಗನನ್ನು ಅಗಲಿದ್ದಾರೆ.
ಚಂದ್ರಶೇಖರ ಬೋಸ್ ಅವರ ನಿಧನಕ್ಕೆ ಎಡರಂಗದ ಅಧ್ಯಕ್ಷ ಬಿಮನ್ ಬೋಸ್ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ, ಎಐಐಇಎ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮಿಶ್ರಾ ಕೂಡಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಲ್ಕತ್ತಾ ವಿಶ್ವವಿದ್ಯಾನಿಲಯದ ಪದವೀಧರನಾದ ಬೋಸ್ ಅವರು ಕಮ್ಯೂನಿಸ್ಟ್ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. 1944ರಲ್ಲಿ ಬೋಸ್ ಅವರು ಹಿಂದೂಸ್ತಾನ್ ಇನ್ಶೂರೆನ್ಸ್ ಕಂಪೆನಿಗೆ ಸೇರ್ಪಡೆಗೊಂಡಿದ್ದು, ಅದೇ ವರ್ಷ ಅವಿಭಜಿತ ಕಮ್ಯೂನಿಸ್ಟ್ ಪಕ್ಷದಲ್ಲಿ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ಅವರ ಜೀವಮಾನದುದ್ದಕ್ಕೂ ಪಕ್ಷದ ಸದಸ್ಯತ್ವವನ್ನು ಉಳಿಸಿಕೊಂಡಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ವಿಮಾ ವಲಯದ ರಾಷ್ಟ್ರೀಕರಣದ ಬಳಿಕ ಬೋಸ್ ಅವರು ಅಖಿಲ ಭಾರತ ಮಟ್ಟದಲ್ಲಿ ವಿಮಾ ಉದ್ಯೋಗಿಗಳನ್ನು ಸಂಘಟಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.
ಜೀವನದ ಕೊನೆಗಾಲದವರೆಗೂ ಬೋಸ್ ಅವರು ಕಮ್ಯೂನಿಸ್ಟ್ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.







