'3 ಬಾರಿ ಜೈ ಹಿಂದ್ ಪಠಿಸಿ': ಆನ್ಲೈನ್ ಪೋಸ್ಟ್ಗಾಗಿ ಬಂಧನಕ್ಕೊಳಗಾಗಿದ್ದ ಆರೋಪಿಗೆ ಜಾಮೀನು ನೀಡುವಾಗ ಅಸ್ಸಾಂ ನ್ಯಾಯಾಲಯ ಷರತ್ತು!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ ಪೋಸ್ಟ್ ಮಾಡಿರುವ ಆರೋಪದಲ್ಲಿ ಬಂಧಿತ ಧುಬ್ರಿ ಜಿಲ್ಲೆಯ ಗೌರಿಪುರದ ನಿವಾಸಿ ಆರಿಫ್ ರೆಹಮಾನ್ಗೆ ಅಸ್ಸಾಂ ನ್ಯಾಯಾಲಯ ಜಾಮೀನು ನೀಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಎಸ್.ಬಿ. ರೆಹಮಾನ್ ಅವರ ಪೀಠ, ಆರಿಫ್ ರೆಹಮಾನ್ಗೆ ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿದೆ. ʼ21 ದಿನಗಳ ಕಾಲ ಪ್ರಕರಣದ ತನಿಖಾಧಿಕಾರಿಯ ಮುಂದೆ ಹಾಜರಾಗಿ ಬೆಳಿಗ್ಗೆ 3 ಬಾರಿ 'ಜೈ ಹಿಂದ್' ಎಂದು ಹೇಳಬೇಕು. ಅದರ ವೀಡಿಯೊವನ್ನು ರೆಕಾರ್ಡ್ ಮಾಡಿ ಪ್ರತಿದಿನ ತನ್ನ ವೈಯಕ್ತಿಕ ಫೇಸ್ಬುಕ್ ಖಾತೆ ಅಥವಾ ಇತರ ಯಾವುದೇ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಅಪ್ಲೋಡ್ ಮಾಡಬೇಕುʼ ಎಂದು ಜಾಮೀನು ಆದೇಶದಲ್ಲಿ ಷರತ್ತು ವಿಧಿಸಲಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ, ಪಾಕ್ ವಿರುದ್ಧ ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆ ನಡೆಸಿತ್ತು. ಇದೇ ಸಮಯದಲ್ಲಿ ಆರಿಫ್ ರೆಹಮಾನ್ನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು.
ʼಕೆಲವು ವ್ಯಕ್ತಿಗಳು ಹಿಂದೂಗಳ ಸಾವನ್ನು ಬಹಿರಂಗವಾಗಿ ಸಂಭ್ರಮಿಸುತ್ತಿದ್ದಾರೆʼ ಎಂದು ಹೇಳುವ ಮೂಲಕ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬಂಧನವನ್ನು ಸಮರ್ಥಿಸಿಕೊಂಡಿದ್ದರು. ಹಿಮಂತ ಬಿಸ್ವಾ ಶರ್ಮಾ ಅವರ ಪೋಸ್ಟ್ ಪ್ರಕಾರ, ದೇಶ ವಿರೋಧಿ ಚಟುವಟಿಕೆಯ ಆರೋಪದಲ್ಲಿ 97 ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದಾರೆ.
'ದಿ ಕ್ವಿಂಟ್' ಪತ್ರಿಕೆಯು ಹೆಚ್ಚುತ್ತಿರುವ ಬಂಧನಗಳ ಸಂಖ್ಯೆ, ಬಿಎನ್ಎಸ್, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ ಸೇರಿದಂತೆ ಹಲವಾರು ಕಾನೂನು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ ವರದಿ ಮಾಡಿತ್ತು.
ʼದಿ ಕ್ವಿಂಟ್ʼಗೆ ಲಭ್ಯವಾದ ಆರಿಫ್ ರೆಹಮಾನ್ ಜಾಮೀನು ಆದೇಶದ ಪ್ರತಿ ಪ್ರಕಾರ, ರೆಹಮಾನ್ ಫೇಸ್ಬುಕ್ನಲ್ಲಿ ʼಅಬುಬಿನ್ ಮಿರಾಝುದ್ದೀನ್ ಎಸ್ಕೆʼ ಎಂಬ ಹೆಸರಿನಲ್ಲಿ ನಕಲಿ ಪ್ರೊಫೈಲ್ ರಚಿಸಿದ್ದಾನೆ. ಈ ನಕಲಿ ಪ್ರೊಫೈಲ್ ಬಳಸಿ ಫೇಸ್ಬುಕ್ನಲ್ಲಿ ಪಾಕಿಸ್ತಾನ ಪರ ಪೋಸ್ಟ್ ಅನ್ನು ಹಂಚಿಕೊಂಡಿದ್ದಾನೆ. ಭಾರತೀಯ ಜೆಟ್ಗಳನ್ನು ಹೊಡೆದುರುಳಿಸಿದ್ದಕ್ಕಾಗಿ ಪಾಕಿಸ್ತಾನವನ್ನು ಹೊಗಳಿದ್ದಾನೆ ಎಂದು ಆರೋಪಿಸಲಾಗಿತ್ತು.
ರೆಹಮಾನ್ ಅನ್ನು 2025ರ ಮೇ 9ರಂದು ಬಂಧಿಸಲಾಗಿತ್ತು. ಆತನ ವಿರುದ್ಧ ಬಿಎನ್ಎಸ್ನ ಸೆಕ್ಷನ್ 113(3), 152, 196, 197(1), 352 ಮತ್ತು 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಜೂನ್ 6ರಂದು ಅವರ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ಸರಿಸುಮಾರು ಒಂದು ತಿಂಗಳ ಕಾಲ ಆತ ನ್ಯಾಯಾಂಗ ಬಂಧನದಲ್ಲಿದ್ದ.
"ರಾಷ್ಟ್ರದ ಸಮಗ್ರತೆ" ಮತ್ತು "ಸಾರ್ವಜನಿಕ ಭಾವನೆ"ಯನ್ನು ಮುಂದಿಟ್ಟು ಹೆಚ್ಚುವರಿ ಸಾರ್ವಜನಿಕ ಅಭಿಯೋಜಕರು ಜಾಮೀನನ್ನು ವಿರೋಧಿಸಿದ್ದಾರೆ. ಆದರೆ, ಮೇ 29ರಂದು ಆರೋಪಪಟ್ಟಿ ಸಲ್ಲಿಸಲಾಗಿದೆ ಮತ್ತು ಹೆಚ್ಚಿನ ಕಸ್ಟಡಿ ತನಿಖೆಯ ಅಗತ್ಯವಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ರೆಹಮಾನ್ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ʼವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕು, ಮಾನ್ಯ ಗುರುತಿನ ದಾಖಲೆಗಳನ್ನು ಸಲ್ಲಿಸಬೇಕು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಮತ್ತು "ಜೈ ಹಿಂದ್" ಎಂದು ಪ್ರತಿದಿನ ತನಿಖಾಧಿಕಾರಿಯ ಮುಂದೆ ಹೇಳಿ ವೀಡಿಯೊ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಬೇಕು ಎಂದು ಷರತ್ತು ವಿಧಿಸಿದೆ. ಪಾಲಿಸಲು ವಿಫಲವಾದರೆ ಜಾಮೀನು ರದ್ದಾಗಲಿದೆʼ ಎಂದು ಆದೇಶದಲ್ಲಿ ಹೇಳಲಾಗಿದೆ.







