ಹೈದರಾಬಾದ್ನ ಚಾರ್ಮಿನಾರ್ ಸಮೀಪದ ಕಟ್ಟಡದಲ್ಲಿ ಅಗ್ನಿ ದುರಂತ; 8 ಮಕ್ಕಳ ಸಹಿತ 17 ಮಂದಿ ಮೃತ್ಯು

PC : NDTV
ಹೈದರಾಬಾದ್: ಹೈದರಾಬಾದ್ ಹಳೆ ನಗರದಲ್ಲಿರುವ ಗುಲ್ಝಾರ್ ಹೌಸ್ನ ಸಮೀಪದ ಕಟ್ಟಡವೊಂದರಲ್ಲಿ ರವಿವಾರ ಮುಂಜಾನೆ ಸಂಭವಿಸಿದ ಭಾರೀ ಅಗ್ನಿ ಅವಘಡವೊಂದರಲ್ಲಿ 8 ಮಕ್ಕಳು ಸೇರಿದಂತೆ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಪ್ರಹ್ಲಾದ್ (70), ಮುನ್ನಿ (70), ರಾಜೇಂದ್ರ (65), ಸುಮಿತ್ರಾ (60), ಹಮ್ಯೆ (7) ಅಭಿಷೇಕ್ (31) ಶೀತಲ್ (35), ಪ್ರಿಯಾಂನ್ಸ್ (4), ಇರಾಜ್ (2), ಆರುಷಿ (3), ರಿಷಬ್ (4), ಪ್ರಥಮ್ (1), ಅನುಯನ್ (3), ವರ್ಷ (35), ಪಂಕಜ್ (36), ರಂಜಿನಿ (32), ಇದ್ದು (4) ಎಂದು ಗುರುತಿಸಲಾಗಿದೆ.
‘‘ಕೃಷ್ಣ ಪರ್ಲ್ಸ್ನಲ್ಲಿ ಬೆಂಕಿ ಹೊತ್ತಿಕೊಂಡಿತು ಹಾಗೂ ಜನರು ವಾಸಿಸುವ ಮೇಲಿನ ಮಹಡಿಗಳಿಗೆ ವೇಗವಾಗಿ ಹರಡಿತು’’ ಎಂದು ತೆಲಂಗಾಣ ವಿಪತ್ತು ನಿರ್ವಹಣೆ ಹಾಗೂ ಅಗ್ನಿ ಶಾಮಕ ದಳದ ಮಹಾ ನಿರ್ದೇಶಕ ವೈ. ನಾಗಿ ರೆಡ್ಡಿ ತಿಳಿಸಿದ್ದಾರೆ.
ಅಗ್ನಿ ಶಾಮಕ ದಳ ಬೆಳಗೆ 6.16ಕ್ಕೆ ಕರೆ ಸ್ವೀಕರಿಸಿತು. ಕೂಡಲೇ ಸಾಕಷ್ಟು ಸಿಬ್ಬಂದಿಯೊಂದಿಗೆ ಬೆಳಗ್ಗೆ 6.17ಕ್ಕೆ 11 ಅಗ್ನಿ ಶಾಮಕ ವಾಹನವನ್ನು ಕಳುಹಿಸಿ ಕೊಡಲಾಯಿತು. ರಕ್ಷಣಾ ಸಿಬ್ಬಂದಿ ಹೊಗೆಯಿಂದ ತುಂಬಿದ ಕಟ್ಟಡದಿಂದ ಜನರನ್ನು ತೆರವುಗೊಳಿಸಲು ಉಸಿರಾಟದ ಉಪಕರಣ ಹಾಗೂ ಆಮ್ಲಜನಕದ ಮಾಸ್ಕ್ ಅನ್ನು ಬಳಸಿದರು ಎಂದು ಅವರು ತಿಳಿಸಿದ್ದಾರೆ.
ಬೆಂಕಿ ಹತ್ತಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪ್ರಾಥಮಿಕ ತನಿಖೆ ತಿಳಿಸಿದೆ. ಬೆಂಕಿಯನ್ನು ನಂದಿಸುವಲ್ಲಿ ಹಾಗೂ ಜನರನ್ನು ರಕ್ಷಿಸುವಲ್ಲಿ ಅಗ್ನಿ ಶಾಮಕ ದಳದಿಂದ ಯಾವುದೇ ರೀತಿಯ ಕುಂದುಂಟಾಗಿಲ್ಲ ಎಂದು ಅವರು ಹೇಳಿದ್ದಾರೆ.
ಕಟ್ಟಡದ ಒಳಗೆ ಸಿಲುಕಿಕೊಂಡಿದ್ದ 17 ಮಂದಿಯನ್ನು ರಕ್ಷಣಾ ತಂಡಗಳು 17 ಮಂದಿ ಅಧಿಕಾರಿಗಳು ಹಾಗೂ 70 ಸಿಬ್ಬಂದಿಯ ನೆರವಿನಿಂದ ಯಶಸ್ವಿಯಾಗಿ ರಕ್ಷಿಸಿತು. ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಯಿತು ಎಂದು ಅವರು ತಿಳಿಸಿದ್ದಾರೆ.
ಈ ದುರ್ಘಟನೆ ಕುರಿತು ಪ್ರತಿಕ್ರಿಯಿಸಿರುವ ಭಾರತ್ ರಾಷ್ಟ್ರ ಸಮಿತಿ ಕಾರ್ಯಧ್ಯಕ್ಷ ಕೆ.ಟಿ. ರಾಮರಾವ್ , ‘‘ತೀವ್ರ ಆಘಾತ ಹಾಗೂ ನೋವು ಉಂಟಾಗಿದೆ. ಹಳೆ ನಗರದಲ್ಲಿ ಗುಲ್ಝಾರ್ ಹೌಸ್ ಅಗ್ನಿ ಅವಘಡದ ಮಾಹಿತಿ ಹೊರ ಬಿದ್ದಾಗ ತುಂಬಾ ದುಃಖವಾಯಿತು. ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ’’ ಎಂದಿದ್ದಾರೆ.
ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನ ಪೋಸ್ಟ್ನಲ್ಲಿ ಈ ಅಗ್ನಿ ಅವಘಡದ ಕುರಿತು ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೃತಪಟ್ಟ ಕುಟುಂಬಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.







