ದಿಲ್ಲಿ ಆಭರಣ ಮಳಿಗೆಯ ದರೋಡೆ ಪ್ರಕರಣ | ದರೋಡೆಗಾಗಿ ಸ್ಮೋಕ್ ಬಾಂಬ್ ಗಳನ್ನು ತಯಾರಿಸುತ್ತಿದ್ದ ಕೆಮಿಸ್ಟ್ರಿ ಎಂಫಿಲ್ ಪದವೀಧರನ ಬಂಧನ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದರೋಡೆಗಾಗಿ ಸ್ಮೋಕ್ ಬಾಂಬ್ ಗಳನ್ನು ತಯಾರಿಸಲು ತನ್ನ ಜ್ಞಾನವನ್ನು ಬಳಸುತ್ತಿದ್ದ ದಿಲ್ಲಿ ವಿಶ್ವವಿದ್ಯಾಲಯದ 32 ವರ್ಷದ ರಾಸಾಯನಿಕ ಶಾಸ್ತ್ರ ಎಂಫಿಲ್ ಪದವೀಧರನೊಬ್ಬನನ್ನು ಬಂಧಿಸಲಾಗಿದೆ.
ವಾಯುವ್ಯ ದಿಲ್ಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ನಡೆದಿದ್ದ ಎರಡು ಸಶಸ್ತ್ರ ಆಭರಣ ಮಳಿಗೆ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ರವಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯನ್ನು ಬಿಹಾರದ ಸೀತಾಮಾರಿ ನಿವಾಸಿ ದೀಪ್ ಶುಭಂ ಎಂದು ಗುರುತಿಸಲಾಗಿದ್ದು, ಸದ್ಯ ಹರ್ಯಾಣದ ಸೊಹ್ನಾದಲ್ಲಿ ನೆಲೆಸಿದ್ದಾನೆ. ಎರಡು ದರೋಡೆ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದ್ದು, ತನ್ನ ತವರು ರಾಜ್ಯ ಹರ್ಯಾಣದಲ್ಲಿ ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣವೊಂದರಲ್ಲಿ ಶಿಕ್ಷೆಯನ್ನೂ ಅನುಭವಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
“ಖಚಿತ ಸುಳಿವನ್ನು ಆಧರಿಸಿ ಸೊಹ್ನಾದ ಹರಿ ನಗರ್ ಪ್ರದೇಶದಿಂದ ಬಂಧಿಸಲಾದ ಶುಭಂ, ಬಿಹಾರದಲ್ಲಿನ ಬ್ಯಾಂಕೊಂದರ ದರೋಡೆಗಾಗಿ ಸ್ಮೋಕ್ ಬಾಂಬ್ ತಯಾರಿಸಲು ತನ್ನ ರಾಸಾಯನಿಕ ಶಾಸ್ತ್ರದ ಹಿನ್ನೆಲೆಯನ್ನು ಬಳಸಿಕೊಂಡಿದ್ದ” ಎಂದು ಉಪ ಪೊಲೀಸ್ ಆಯುಕ್ತ (ಅಪರಾಧ ವಿಭಾಗ) ಹರ್ಷ್ ಇಂದೋರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆರೋಪಿಯು ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದರೂ, ಹಣಕಾಸು ಮುಗ್ಗಟ್ಟಿನ ಕಾರಣಕ್ಕೆ ಆತ ಅಪರಾಧ ಕೃತ್ಯಗಳಿಗಿಳಿದಿದ್ದ. ಆತ ಬಿಎಸ್ಸಿ (ಆನರ್ಸ್), ಎಂಎಸ್ಸಿ ಹಾಗೂ ದಿಲ್ಲಿ ವಿಶ್ವವಿದ್ಯಾಲಯದಿಂದ ರಾಸಾಯನಿಕ ಶಾಸ್ತ್ರದಲ್ಲಿ ಎಂಫಿಲ್ ಪದವಿ ಪಡೆದಿದ್ದ. ಆತ ವಿಶಾಖಪಟ್ಟಣಂನಲ್ಲಿ ಒಂದಷ್ಟು ಕಾಲ ಕಾನೂನು ಪದವಿಯನ್ನೂ ವ್ಯಾಸಂಗ ಮಾಡಿದ್ದ ಎಂದು ಅವರು ಹೇಳಿದ್ದಾರೆ.







