Chennai | ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕನ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ
ಕೋಲ್ಕತಾ, ಜ.13: ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ವಲಸೆ ಕಾರ್ಮಿಕನೊಬ್ಬರ ಮೃತದೇಹ ಸೋಮವಾರ ತಮಿಳುನಾಡಿನ ಚೆನ್ನೈನಲ್ಲಿ ಪತ್ತೆಯಾಗಿದೆ.
ಮುರ್ಶಿದಾಬಾದ್ನ ವಲಸೆ ಕಾರ್ಮಿಕನೊಬ್ಬರು ಒಡಿಶಾದಲ್ಲಿ ಹತ್ಯೆಯಾದ ಒಂದು ವಾರದ ಬಳಿಕ ಈ ಘಟನೆ ನಡೆದಿದೆ.
ಚೆನ್ನೈನಲ್ಲಿ ಸೋಮವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವಲಸೆ ಕಾರ್ಮಿಕನನ್ನು ಮುರ್ಶಿದಾಬಾದ್ ಜಿಲ್ಲೆಯ ಸುತಿ ತಾಲೂಕಿನ ಅಮೈ ಶೇಖ್ ಎಂದು ಗುರುತಿಸಲಾಗಿದೆ.
ಹೆಚ್ಚಿನ ಮಾಹಿತಿ ಸಂಗ್ರಹಿಸುವ ಸಲುವಾಗಿ ಮುರ್ಶಿದಾಬಾದ್ ಪೊಲೀಸರು ಚೆನ್ನೈನಲ್ಲಿ ಇರುವ ಆತನ ಸಹೋದ್ಯೋಗಿಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ.
“ಅಮೈ ಶೇಖ್ ದಿನಗೂಲಿ ಮೇಸ್ತ್ರಿ ಕೆಲಸಕ್ಕಾಗಿ ಚೆನ್ನೈಗೆ ಹೋಗಿದ್ದ. ಅಲ್ಲಿ ಆತನನ್ನು ಯಾರೋ ಹತ್ಯೆ ಮಾಡಿದ್ದಾರೆ” ಎಂದು ಆತನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಚೆನ್ನೈನಲ್ಲಿ ಅಮೈ ಜೊತೆಗೆ ಕೆಲಸ ಮಾಡುತ್ತಿದ್ದ ಹಾಗೂ ಮುರ್ಶಿದಾಬಾದ್ ನಿವಾಸಿಗಳಾದ ಸಹೋದ್ಯೋಗಿಗಳು, ಅಮೈ ಮೃತಪಟ್ಟ ವಿಷಯವನ್ನು ಸೋಮವಾರ ರಾತ್ರಿ ಆತನ ಕುಟುಂಬಕ್ಕೆ ತಿಳಿಸಿದ್ದಾರೆ.
ಅಮೈ ಪತ್ನಿ, ಮೂವರು ಅಪ್ರಾಪ್ತ ಪುತ್ರರು ಹಾಗೂ ತಾಯಿಗೆ ಏಕೈಕ ಜೀವನಾಧಾರವಾಗಿದ್ದ ಎಂದು ಮೂಲಗಳು ತಿಳಿಸಿವೆ.
“ಚೆನ್ನೈನಲ್ಲಿ ಯಾರೋ ಆತನನ್ನು ಕೊಂದಿದ್ದಾರೆ. ಘಟನೆ ಕುರಿತು ತನಿಖೆ ನಡೆಸುವಂತೆ ನಾವು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದೇವೆ” ಎಂದು ಆತನ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.







