ಛತ್ತೀಸ್ಗಡ: 2019ರಿಂದ 177 ಭದ್ರತಾ ಸಿಬ್ಬಂದಿಗಳ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ರಾಯಪುರ: ರಾಜ್ಯದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಗಳಿಗಾಗಿ ನಿಯೋಜಿತ ಅರೆಸೇನಾ ಪಡೆಗಳ ಸುಮಾರು 40 ಸಿಬ್ಬಂದಿಗಳು ಸೇರಿದಂತೆ ಕಳೆದ ಆರೂವರೆ ವರ್ಷಗಳಲ್ಲಿ ಛತ್ತೀಸ್ಗಡದಲ್ಲಿ 177 ಭದ್ರತಾ ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗೃಹಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ವಿಜಯ ಶರ್ಮಾ ಅವರು ಬುಧವಾರ ವಿಧಾನಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಈ ಆತ್ಮಹತ್ಯೆಗಳಿಗೆ ಕೌಟುಂಬಿಕ,ವೈಯಕ್ತಿಕ ಮತ್ತು ಆರೋಗ್ಯ ಸಮಸ್ಯೆಗಳು ಕಾರಣವಾಗಿದ್ದವು ಎನ್ನುವುದು ಪೋಲಿಸ್ ತನಿಖೆಯಲ್ಲಿ ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.
ಸಚಿವರು ನೀಡಿರುವ ಮಾಹಿತಿಯಂತೆ ರಾಜ್ಯದಲ್ಲಿ 2019 ಮತ್ತು ಜೂ.15,2025ರ ನಡುವೆ 177 ಭದ್ರತಾ ಸಿಬ್ಬಂದಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದೇ ಅವಧಿಯಲ್ಲಿ ಅರೆಸೇನಾ ಪಡೆಗಳ ಸಿಬ್ಬಂದಿಗಳು ಸೇರಿದಂತೆ 18 ಭದ್ರತಾ ಸಿಬ್ಬಂದಿಗಳು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇವುಗಳಲ್ಲಿ ಸಿಬ್ಬಂದಿಗಳು ತಮ್ಮ ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ ಕೆಲವು ಘಟನೆಗಳೂ ಸೇರಿವೆ ಎಂದು ಶರ್ಮಾ ಉತ್ತರದಲ್ಲಿ ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿಗಳಲ್ಲಿ ಆತ್ಮಹತ್ಯೆ ಪ್ರವೃತ್ತಿಯನ್ನು ತಡೆಯಲು ಕೌನ್ಸೆಲಿಂಗ,ನಿಯಮಿತವಾಗಿ ರಜಾ ಮಂಜೂರು,ಯೋಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಸೇರಿದಂತೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದೂ ಶರ್ಮಾ ತಿಳಿಸಿದ್ದಾರೆ.







