ಛತ್ತೀಸ್ಗಡ | 27 ನಕ್ಸಲೀಯರು ಶರಣಾಗತಿ

ಸಾಂದರ್ಭಿಕ ಚಿತ್ರ | Photo Credi : X
ಸುಕ್ಮಾ, ಅ. 15: ಇಪ್ಪತ್ತೇಳಕ್ಕೂ ಅಧಿಕ ನಕ್ಸಲೀಯರು ಛತ್ತೀಸ್ಗಡದ ಸುಕ್ಮಾ ಜಿಲ್ಲೆಯಲ್ಲಿ ಬುಧವಾರ ಶರಣಾಗತರಾಗಿದ್ದಾರೆ. ಇವರ ಪೈಕಿ 16 ಮಂದಿ ನಕ್ಸಲೀಯರ ತಲೆಗೆ ಒಟ್ಟು 50 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹಿರಿಯ ನಕ್ಸಲೀಯ ಮಲ್ಲೋಜುಲಾ ವೇಣುಗೋಪಾಲ್ ರಾವ್ ಆಲಿಯಾಸ್ ಭೂಪತಿ ಹಾಗೂ ಇತರ 60 ಮಂದಿ ನಕ್ಸಲೀಯರು ಮಹಾರಾಷ್ಟ್ರದ ಗಡ್ಚಿರೋಳಿಯಲ್ಲಿ ಶರಣಾಗತರಾದ ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ನಕ್ಸಲಿಸಂ ಅನ್ನು ಕೊನೆಗೊಳಿಸಲು ಸರಕಾರ ದೃಢ ನಿಶ್ಚಯ ಮಾಡಿದೆ ಎಂದು ಹೇಳಿದ್ದಾರೆ. ಛತ್ತೀಸ್ಗಡದ ಬಸ್ತಾರ್ ವಲಯದಲ್ಲಿ ಕೇಂದ್ರೀಕೃತವಾಗಿರುವ ನಕ್ಸಲ್ವಾದವನ್ನು 2026 ಮಾರ್ಚ್ 31ರ ಒಳಗೆ ನಿರ್ಮೂಲನೆ ಮಾಡಲಾಗುವುದು ಎಂದು ಅವರು ಪ್ರತಿಪಾದಿಸಿದ್ದಾರೆ.
ಛತ್ತೀಸ್ಗಢದಲ್ಲಿ ಬುಧವಾರ ಶರಣಾಗತರಾದ 27 ನಕ್ಸಲೀಯರ ಪೈಕಿ 10 ಮಹಿಳೆಯರು. ಅವರು ಇಲ್ಲಿ ಹಿರಿಯ ಪೊಲೀಸರು ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ ಅಧಿಕಾರಿಗಳ ಮುಂದೆ ಶರಣಾಗಾತರಾದರು.
‘‘ಪೊಳ್ಳು ಮಾವೋವಾದಿ ಸಿದ್ಧಾಂತ, ನಕ್ಸಲರು ಅಮಾಯಕ ಬುಡಕಟ್ಟು ಜನಾಂಗದವರ ಮೇಲೆ ನಡೆಸುವ ದೌರ್ಜನ್ಯಗಳು, ಭದ್ರತಾ ಪಡೆಗಳ ಹೆಚ್ಚುತ್ತಿರುವ ಪ್ರಭಾವ ಇದಕ್ಕೆ ಕಾರಣ’’ ಎಂದು ಸುಕ್ಮಾ ಪೊಲೀಸ್ ಅಧೀಕ್ಷಕ ಕಿರಣ್ ಚವ್ಹಾಣ್ ತಿಳಿಸಿದ್ದಾರೆ.
ಕುಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಉತ್ತೇಜಿಸುವ ಗುರಿ ಹೊಂದಿರುವ ಛತ್ತೀಸ್ಗಡ ಸರಕಾರದ ‘‘ನಿಯಾದ್ ನೆಲ್ಲನಾರ್’’ ಯೋಜನೆ, ರಾಜ್ಯ ಸರಕಾರದ ನೂತನ ಶರಣಾಗತಿ ಹಾಗೂ ಪುನರ್ವಸತಿ ನೀತಿಯಿಂದ ನಾವು ಪ್ರಭಾವಿತರಾಗಿದ್ದೇವೆ ಎಂದು ಶರಣಾಗತ ನಕ್ಸಲೀಯರು ಹೇಳಿದ್ದಾರೆ.







