ಚತ್ತೀಸ್ ಗಢ: ಗುಂಡಿನ ಕಾಳಗದಲ್ಲಿ 6 ಮಂದಿ ಶಂಕಿ ನಕ್ಸಲೀಯರು ಮೃತ್ಯು

photo: ANI
ರಾಯಪುರ, ನ. 11: ಚತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಶಂಕಿತ ನಕ್ಸಲೀಯರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಮಂಗಳವಾರ ನಡೆದ ಗುಂಡಿನ ಕಾಳಗದಲ್ಲಿ 6 ಮಂದಿ ಶಂಕಿತ ನಕ್ಸಲೀಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಹಿರಿಯ ಮಾವೋವಾದಿ ಸದಸ್ಯರು ಇರುವ ಕುರಿತು ಸ್ವೀಕರಿಸಿದ ಮಾಹಿತಿಯ ಆದಾರದಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ತಂಡ ನಕ್ಸಲ್ ನಿಗ್ರಹ ಕಾರ್ಯಾಚರಣೆ ಆರಂಭಿಸಿತು. ಈ ಸಂದರ್ಭ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಬೆಳಗ್ಗೆ ಸುಮಾರು 10 ಗಂಟೆಗೆ ಗುಂಡಿನ ಕಾಳಗ ನಡೆಯಿತು ಎಂದು ಬಿಜಾಪುರ ಪೊಲೀಸ್ ವರಿಷ್ಠ ಜಿತೇಂದ್ರ ಯಾದವ್ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬಿಜಾಪುರ ಹಾಗೂ ದಂತೇವಾಡ ಜಿಲ್ಲೆಯ ಪೊಲೀಸ್ನ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (ಡಿಆರ್ಜಿ) ಹಾಗೂ ವಿಶೇಷ ಕಾರ್ಯ ಪಡೆ (ಎಸ್ಟಿಎಫ್)ಯ ಸಿಬ್ಬಂದಿ ಪಾಲ್ಗೊಂಡರು ಎಂದು ಅವರು ತಿಳಿಸಿದ್ದಾರೆ.
ನಕ್ಸಲೀಯರು ಮುಖಾಮುಖಿಯಾದಾಗ ಹಲವು ಗಂಟೆಗಳ ಕಾಲ ಗುಂಡಿನ ಕಾಳಗ ನಡೆಯಿತು. ಅನಂತರ ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ 6 ಮಂದಿ ನಕ್ಸಲೀಯರ ಮೃತದೇಹ, ಇನ್ಸಾನ್ ರೈಫಲ್, ಸ್ಟೆನ್ ಗನ್, .303 ರೈಫಲ್ ಸೇರಿದಂತೆ ಆಟೊಮ್ಯಾಟಿಕ್ ಗನ್ ಗಳು ಹಾಗೂ ಸ್ಫೋಟಕಗಳು ಪತ್ತೆಯಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.







