Chhattisgarh | ಪ್ರಶ್ನೆ ಪತ್ರಿಕೆಯಲ್ಲಿ ನಾಯಿಯ ಹೆಸರಿಗೆ ಆಯ್ಕೆಗಳಲ್ಲಿ ‘ರಾಮ’; ಮುಖ್ಯೋಪಾಧ್ಯಾಯಿನಿ ಅಮಾನತು

Photo Credit : X
ರಾಯಪುರ, ಜ.12: ನಾಲ್ಕನೇ ತರಗತಿಯ ಇಂಗ್ಲಿಷ್ ಪ್ರಶ್ನೆಪತ್ರಿಕೆಯಲ್ಲಿ ವ್ಯಕ್ತಿಯೋರ್ವರ ನಾಯಿಯ ಹೆಸರಿನ ಕುರಿತು ಕೇಳಿದ ಪ್ರಶ್ನೆಗೆ ಸಂಭಾವ್ಯ ಉತ್ತರಗಳಲ್ಲಿ ‘ರಾಮ’ ಅನ್ನು ಪಟ್ಟಿ ಮಾಡಿದ್ದಕ್ಕಾಗಿ ರಾಯಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
‘ರಾಮು (Ramu)’ ಅನ್ನು ಒಂದು ಆಯ್ಕೆಯಾಗಿ ಬರೆಯಲು ತಾನು ಉದ್ದೇಶಿಸಿದ್ದೆ, ಆದರೆ ಕಣ್ತಪ್ಪಿನಿಂದ ‘u’ ಅಕ್ಷರವನ್ನು ಬಿಟ್ಟುಬಿಟ್ಟಿದ್ದೆ ಎಂದು ಮುಖ್ಯೋಪಾಧ್ಯಾಯಿನಿ ಶಿಖಾ ಸೋನಿ ಒಪ್ಪಿಕೊಂಡಿದ್ದಾರೆ.
ಕಾಣೆಯಾಗಿದ್ದ ಅಕ್ಷರವನ್ನು ಪತ್ತೆಹಚ್ಚಲು ತಾನು ವಿಫಲಗೊಂಡಿದ್ದೆ ಎಂದು ಪ್ರಶ್ನೆಪತ್ರಿಕೆಯನ್ನು ಪರಿಶೀಲಿಸಿದ್ದ ಗುತ್ತಿಗೆ ಆಧಾರದ ಸಹಾಯಕ ಶಿಕ್ಷಕಿ ನಮ್ರತಾ ವರ್ಮಾ ಕೂಡ ಹೇಳಿದ್ದು, ವಿವಾದದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ರಾಯಪುರ ಜಿಲ್ಲೆಯ ಟಿಲ್ಡಾ ಬ್ಲಾಕ್ ನ ನಕ್ತಿಯಲ್ಲಿರುವ ಶಾಲೆಯಲ್ಲಿ ಈ ಘಟನೆ ನಡೆದಿದೆ.
ತಾವು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಸಮರ್ಥಿಸಿಕೊಂಡಿರುವ ಸೋನಿ ಮತ್ತು ವರ್ಮಾ ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.
ಆದಾಗ್ಯೂ, ವಿಹಿಂಪ ಮತ್ತು ಭಜರಂಗ ದಳ ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ ಪ್ರಕರಣ ದಾಖಲಾಗಿದೆ.
ಜಿಲ್ಲಾ ಶಿಕ್ಷಣಾಧಿಕಾರಿ ಹಿಮಾಂಶು ಭಾರ್ತಿಯಾ ಅವರು ಈ ಕುರಿತು ವಿಚಾರಣೆಯನ್ನು ಆರಂಭಿಸಿದ್ದು, ದೂರಿನ ತನಿಖೆಗಾಗಿ ಐವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.







