Chhattisgarh: ಮತಾಂತರ; ಎರಡು ಕುಟುಂಬಗಳ ಸದಸ್ಯರಿಗೆ ಥಳಿತ

Photo Credit : newindianexpress
ರಾಯಪುರ, ಜ. 25: ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಎರಡು ಕುಟುಂಬಗಳಿಗೆ ಥಳಿಸಿ, ಹಳ್ಳಿ ತೊರೆಯುವಂತೆ ಸೂಚಿಸಿದ ಘಟನೆ ಛತ್ತೀಸ್ಗಢದ ದಕ್ಷಿಣ ಬಸ್ತಾರ್ ನ ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ.
ನಾರಾಯಣಪುರ ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ಇಕ್ನಾರ್ ಗ್ರಾಮದಲ್ಲಿ ದಶಕಗಳಿಂದ ಆರೋಗ್ಯ ಸೇವೆ, ಶಿಕ್ಷಣ ಹಾಗೂ ರಸ್ತೆಗಳಂತಹ ಮೂಲಭೂತ ಸೌಕರ್ಯಗಳ ಕೊರತೆ ಇದೆ.
ಇಕ್ನಾರ್ ಗ್ರಾಮದಲ್ಲಿ ಒಟ್ಟು 18 ಕುಟುಂಬಗಳಿವೆ. ಅವುಗಳಲ್ಲಿ ಎರಡು ಕುಟುಂಬಗಳು ಐದು ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿವೆ.
ಮತಾಂತರಗೊಂಡ ಕುಟುಂಬಗಳು ಸಾಂಪ್ರದಾಯಿಕ ಪದ್ಧತಿ ಹಾಗೂ ಧಾರ್ಮಿಕ ಆಚರಣೆಗಳನ್ನು ವಿರೋಧಿಸುತ್ತಿವೆ ಎಂದು ಗ್ರಾಮಸ್ಥರು ಪ್ರತಿಪಾದಿಸಿದ್ದಾರೆ. ಮತಾಂತರದ ವಿಷಯವನ್ನು ಸೌಹಾರ್ದಯುತವಾಗಿ ಪರಿಹರಿಸಲು ಕೆಲವು ಸ್ಥಳೀಯರು ಈ ಕುಟುಂಬಗಳೊಂದಿಗೆ ಚರ್ಚಿಸಲು ಪ್ರಯತ್ನಿಸಿದಾಗ ಉದ್ವಿಗ್ನತೆ ಉಂಟಾಗಿದೆ.
ಅವರು ತಮಗೆ ಥಳಿಸಿದರು, ತಮ್ಮ ವಸ್ತುಗಳನ್ನು ಮನೆಯಿಂದ ಹೊರಗೆಸೆದರು. ಸಂಗ್ರಹಿಸಿಟ್ಟಿದ್ದ ಪಡಿತರ ಹಾಗೂ ಪ್ರಮುಖ ದಾಖಲೆಗಳಿಗೆ ಬೆಂಕಿ ಹಚ್ಚಿದರು ಎಂದು ಮತಾಂತರಗೊಂಡ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
‘‘ನಾವು ಪ್ರಾರ್ಥನೆಗೆ ಹಾಜರಾಗುತ್ತಿದ್ದುದರಿಂದ ಮತಾಂತರದ ಬಗ್ಗೆ ಗ್ರಾಮಸ್ಥರು ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ನಮ್ಮ ಮನೆಗಳಿಗೆ ಹಾನಿ ಮಾಡಲಾಗಿದೆ. ಗ್ರಾಮ ತ್ಯಜಿಸುವಂತೆ ಸೂಚಿಸಲಾಗಿದೆ. ಗಾಯಗೊಂಡ ಸದಸ್ಯರು ಸಮುದಾಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಗ್ರಾಮಸ್ಥರು ತಮ್ಮ ನಂಬಿಕೆಯನ್ನು ಅನುಸರಿಸುತ್ತಿದ್ದಾರೆ. ಅದೇ ರೀತಿ ಅವರು ನಮ್ಮ ಕ್ರೈಸ್ತ ಧರ್ಮದ ನಂಬಿಕೆಯನ್ನು ಅನುಸರಿಸಲು ಕೂಡ ಅವಕಾಶ ನೀಡಬೇಕು’’ ಎಂದು ಸಂತ್ರಸ್ತರೊಬ್ಬರು ಹೇಳಿದ್ದಾರೆ.







