ಛತ್ತೀಸ್ಗಢ | ಸರಪಂಚ್ಗೆ 'ಮತ ಹಾಕಲಿಲ್ಲ' ಎಂಬ ಕಾರಣಕ್ಕೆ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ, ಮನೆ ಧ್ವಂಸ : ಆರೋಪ

Photo credit: newindianexpress.com
ರಾಯ್ಪುರ : ಛತ್ತೀಸ್ಗಢದ ಬೆಮೆತಾರಾ ಜಿಲ್ಲೆಯಲ್ಲಿ ಗ್ರಾಮದ ಸರಪಂಚ್ ನಿರ್ದೇಶನದ ಮೇರೆಗೆ ಕುಟುಂಬವೊಂದಕ್ಕೆ ಸಾಮಾಜಿಕವಾಗಿ ಬಹಿಷ್ಕರ ವಿಧಿಸಿರುವುದಲ್ಲದೆ ಅವರ ನಿವಾಸವನ್ನು ಕೆಡವಿರುವ ಆರೋಪ ಕೇಳಿ ಬಂದಿದೆ. ಪಂಚಾಯತ್ ಚುನಾವಣೆಯ ಸಮಯದಲ್ಲಿ ಮತ ಹಾಕಿಲ್ಲ ಎಂಬ ಕಾರಣಕ್ಕೆ ಸರಪಂಚ್ ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ ಎಂದು newindianexpress.com ವರದಿ ಮಾಡಿದೆ.
ರಾಯ್ಪುರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಬೆಮೆತಾರಾದ ನವಗಢ ತಹಸಿಲ್ನ ಗದಾಮೋಡ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಂತ್ರಸ್ತ ಕುಟುಂಬ ಮತ್ತು ಸರಪಂಚ್ ಇಬ್ಬರೂ ಸತ್ನಾಮಿ (ಪರಿಶಿಷ್ಟ ಜಾತಿ) ಸಮುದಾಯಕ್ಕೆ ಸೇರಿದವರು.
“ನಮ್ಮದು 10 ಸದಸ್ಯರ ಕುಟುಂಬವಾಗಿದ್ದು, ಭಯದಿಂದ ಬದುಕುತ್ತಿದ್ದೇವೆ. ನಾವು 25 ವರ್ಷಗಳಿಂದ ವಾಸಿಸುತ್ತಿದ್ದ ನಮ್ಮ ಮನೆಯನ್ನು ಸರಪಂಚ್ ಮಹಾಜನ್ ಮನ್ಹಾರೆ ಅವರ ಸೂಚನೆಯ ಮೇರೆಗೆ ತಹಶೀಲ್ದಾರ್ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿಯ ಸಮ್ಮುಖದಲ್ಲಿ ಬುಲ್ಡೋಝರ್ ಬಳಸಿ ನೆಲಸಮ ಮಾಡಲಾಗಿದೆ. ಸರಪಂಚ್ ಆದೇಶವನ್ನು ಪ್ರಶ್ನಿಸಲು ನಮಗೆ ಯಾವುದೇ ಅವಕಾಶ ನೀಡಲಾಗಿಲ್ಲ” ಎಂದು ವಿಜಯ ಲಕ್ಷ್ಮಿ ಮನ್ಹಾರೆ ಹೇಳಿದರು.
ವಿಜಯ ಲಕ್ಷ್ಮಿ ಮನ್ಹಾರೆ ನ್ಯಾಯ ಮತ್ತು ಪರಿಹಾರ ಕೋರಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್, ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮತ್ತು ತಹಶೀಲ್ದಾರ್ಗೆ ದೂರು ನೀಡಿದ್ದಾರೆ.
ಹಲವು ವರ್ಷಗಳ ಹಿಂದೆ ಅಕ್ರಮವಾಗಿ ನಿರ್ಮಿಸಿರುವ ಮನೆಯನ್ನು ಖಾಲಿ ಮಾಡುವಂತೆ ಸರಪಂಚ್ ಈ ಹಿಂದೆ ನೋಟಿಸ್ ನೀಡಿದ್ದರು. ಆದರೆ ಸಂತ್ರಸ್ತ ಕುಟುಂಬವು ಸರಪಂಚ್ ಅವರ ಆದೇಶವನ್ನು ಸ್ವೀಕರಿಸಲು ನಿರಾಕರಿಸಿತ್ತು.
“ನಾವು ಈ ಹಿಂದೆ ನವಗಢ ತಹಶೀಲ್ದಾರ್ ಮತ್ತು ಪೊಲೀಸ್ ಠಾಣೆಯ ಉಸ್ತುವಾರಿಗೆ ಲಿಖಿತ ದೂರುಗಳನ್ನು ನೀಡಿದ್ದೇವೆ. ಆದರೆ ಅವರು ನಮ್ಮ ದೂರನ್ನು ಸ್ವೀಕರಿಸಲಿಲ್ಲ ಮತ್ತು ಸರಪಂಚ್ ನೀಡಿರುವ ಆದೇಶಗಳನ್ನು ಪಾಲಿಸುವಂತೆ ನಮಗೆ ಹೇಳಿದರು. ಪಂಚಾಯತ್ ಚುನಾವಣೆಯ ಸಮಯದಲ್ಲಿ ಬೆಂಬಲ ನೀಡದ ಕಾರಣಕ್ಕೆ ಮಹಾಜನ್ ಮನ್ಹರೆ ನಮ್ಮ ವಿರುದ್ಧ ದ್ವೇಷವನ್ನು ಸಾಧಿಸುತ್ತಿದ್ದಾರೆ. ಶಾಲೆಯಲ್ಲಿ ನಮ್ಮ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿಯಲ್ಲಿ ಊಟ ಸಿಗುತ್ತಿಲ್ಲ ಮತ್ತು ಗ್ರಾಮದ ಇತರ ಮಕ್ಕಳೊಂದಿಗೆ ಆಟವಾಡಲು ಅವಕಾಶ ನೀಡುತ್ತಿಲ್ಲ” ಎಂದು ವಿಜಯ ಲಕ್ಷ್ಮಿ ಮನ್ಹಾರೆ ಆರೋಪಿಸಿದ್ದಾರೆ.
ಈ ಬಗ್ಗೆ ಬೆಮೆತಾರ ಜಿಲ್ಲಾಧಿಕಾರಿ ರಣವೀರ್ ಶರ್ಮಾ ಮಾತನಾಡಿ, ಗ್ರಾಮಸಭೆಯು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಕಟ್ಟಡವನ್ನು ಕೆಡವುವ ಅಧಿಕಾರವನ್ನು ಹೊಂದಿದೆ. ಆದರೆ ಈ ಘಟನೆಯ ಬಗ್ಗೆ ನನಗೆ ತಿಳಿದಿಲ್ಲ. ಸಂತ್ರಸ್ತ ಕುಟುಂಬಕ್ಕೆ ಸಾಮಾಜಿಕವಾಗಿ ಬಹಿಷ್ಕರಿಸಿದರೆ ನಾವು ಕ್ರಮ ಕೈಗೊಳ್ಳುತ್ತೇವೆ ಮತ್ತು ಅವರು ಅರ್ಹ ಸಾಮಾಜಿಕ ಕಲ್ಯಾಣ ಯೋಜನೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.







