ಚತ್ತೀಸ್ಗಢ: ಐಇಡಿ ಸ್ಪೋಟ, ಇಬ್ಬರು ಕಾರ್ಮಿಕರು ಸಾವು
ಸಾಂದರ್ಭಿಕ ಚಿತ್ರ
ನಾರಾಯಣಪುರ: ಚತ್ತೀಸ್ಗಢದ ನಾರಾಯಣಪುರ ಜಿಲ್ಲೆಯ ಕಬ್ಬಿಣದ ಅದಿರು ಗಣಿಯಲ್ಲಿ ನಕ್ಸಲೀಯರು ಇರಿಸಿದ ಐಇಡಿ ಶುಕ್ರವಾರ ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ರಾಯಪುರದಿಂದ 350 ಕಿ.ಮೀ. ದೂರದಲ್ಲಿರುವ, ಛೋಟೆ ಡೊಂಗಾರ್ ಠಾಣಾ ವ್ಯಾಪ್ತಿಯ ಆಮ್ದಾಯಿ ಘಾಟಿಯಲ್ಲಿರುವ ಕಬ್ಬಿಣದ ಅದಿರು ಗಣಿಯಲ್ಲಿ ಬೆಳಗ್ಗೆ 7.30ಕ್ಕೆ ಮೂವರು ಕಾರ್ಮಿಕರು ಕೆಲಸ ಮಾಡಲು ಆರಂಭಿಸಿದ ಸಂದರ್ಭ ಈ ಸ್ಫೋಟ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆಮ್ದಾಯಿ ಘಾಟಿಯಲ್ಲಿರುವ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ಜೈಸ್ವಾಲ್ ನೆಕೊ ಇಂಡಸ್ಟ್ರೀಸ್ ಲಿಮಿಟೆಡ್ (ಜೆಎನ್ಐಎಲ್)ಗೆ ಮಂಜೂರು ಮಾಡಲಾಗಿದೆ. ನಕ್ಸಲೀಯರು ಈ ಯೋಜನೆಯನ್ನು ಬಹಳ ಸಮಯದಿಂದ ವಿರೋಧಿಸುತ್ತಿದ್ದಾರೆ.
ಕಾರ್ಮಿಕರು ಐಇಡಿಯ ಸಂಪರ್ಕಕ್ಕೆ ಬಂದಾಗ ಅದು ಸ್ಫೋಟಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವರನ್ನು ನಾರಾಯಣಪುರ ಜಿಲ್ಲೆಯ ನಿವಾಸಿ ರಿತೇಶ್ ಗಾಗ್ಡಾ (21) ಹಾಗೂ ಶ್ರವಣ್ ಗಾಗ್ಡಾ (24) ಎಂದು ಗುರುತಿಸಲಾಗಿದೆ. ಉಮೇಶ್ ರಾಣಾ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.