ಛತ್ತೀಸ್ಗಡ : ನೂತನ ಸಿಎಂ ಆಗಿ ವಿಷ್ಣು ದಿಯೋ ಸಾಯಿ ಬುಧವಾರ ಪ್ರಮಾಣವಚನ ಸ್ವೀಕಾರ, ಪ್ರಧಾನಮಂತ್ರಿ ಮೋದಿ ಉಪಸ್ಥಿತಿ
ವಿಷ್ಣು ದಿಯೋ ಸಾಯಿ | Photo: PTI
ರಾಯ್ಪುರ : ಇಲ್ಲಿನ ವಿಜ್ಞಾನ ಕಾಲೇಜು ಮೈದಾನದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಛತ್ತೀಸ್ಗಡದ ನೂತನ ಸಿಎಂ ಆಗಿ ವಿಷ್ಣು ದಿಯೋ ಸಾಯಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾರ್ಯ್ರಕಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ndtv ವರದಿ ಮಾಡಿದೆ.
ಬುಡಕಟ್ಟು ನಾಯಕ ಮತ್ತು ಮಾಜಿ ಕೇಂದ್ರ ಸಚಿವ ವಿಷ್ಣು ದಿಯೋ ಸಾಯಿ ಅವರು ಛತ್ತೀಸ್ಗಡದ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಿಸಿದೆ.
ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಹಲವು ಬಿಜೆಪಿ ಆಡಳಿತವಿರುವ ರಾಜ್ಯಗಳ ಸಿಎಂಗಳು ಮತ್ತು ಹಿರಿಯ ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಆರೆಸ್ಸೆಸ್ ನೆಡೆಗೆ ಒಲವು ಹೊಂದಿರುವ ನಿಯೋಜಿತ ಮುಖ್ಯಮಂತ್ರಿ ಸಾಯಿ, ರಾಜ್ಯದಲ್ಲಿ ಪಕ್ಷದ ಹಿರಿಯ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ಗೆ ನಿಕಟರಾಗಿದ್ದಾರೆ.
ಕಳೆದ ತಿಂಗಳು, ಚುನಾವಣಾ ಪೂರ್ವದಲ್ಲಿ, ಕುಂಕೂರಿನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಅಮಿತ್ ಶಾ, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಸಾಯಿ ಅವರನ್ನು ದೊಡ್ಡ ಮನುಷ್ಯರನ್ನಾಗಿ ಮಾಡಲಾಗುವುದು ಎಂದು ಹೇಳಿದ್ದರು.
2020 ರಿಂದ 2022 ರವರೆಗೆ ಪಕ್ಷದ ಛತ್ತೀಸ್ಗಡ ಬಿಜೆಪಿ ಅಧ್ಯಕ್ಷರಾಗಿರುವ, ನಾಲ್ಕು ಅವಧಿಯ ಸಂಸರಾಗಿರುವ ವಿಷ್ಣು ದಿಯೋ ಸಾಯಿ ತಮ್ಮ ಸಂಘಟನಾ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರದ್ದು ವಿವಾದರಹಿತ ವ್ಯಕ್ತಿತ್ವ.
ಸಾಯಿ ರಾಜ್ಯದ ಮೊದಲ ಬುಡಕಟ್ಟು ಮುಖ್ಯಮಂತ್ರಿ ಎಂದು ಬಿಜೆಪಿ ಹೇಳಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಬುಡಕಟ್ಟು ಸ್ಥಾನಮಾನವನ್ನು ಬಿಜೆಪಿ ವಿರೋಧಿಸುತ್ತಾ ಬಂದಿದೆ. ಅವರ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ಛತ್ತೀಸ್ಗಡ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಅದನ್ನು ಪರಿಶೀಲಿಸಲು ನ್ಯಾಯಾಲಯ ಸಮಿತಿಯನ್ನು ರಚಿಸುವಂತೆ ಆದೇಶಿಸಿತ್ತು.