ಆಪರೇಷನ್ ಬ್ಲ್ಯೂಸ್ಟಾರ್ ಹೇಳಿಕೆ | ಚಿದಂಬರಂ ಒತ್ತಡಕ್ಕೆ ಸಿಲುಕಿ ಇಂತಹ ಹೇಳಿಕೆ ನೀಡಿದ್ದಾರೆಯೇ?: ಕಾಂಗ್ರೆಸ್ ನಾಯಕ ರಶೀದ್ ಆಲ್ವಿ

ಹೊಸದಿಲ್ಲಿ,ಅ.12: ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಚಿದಂಬರಂ ವಿರುದ್ಧ ಈಗಲೂ ಕ್ರಿಮಿನಲ್ ಪ್ರಕರಣಗಳು ಬಾಕಿಯಿರುವುದರಿಂದ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆಯೇ ಎಂದು ಕಾಂಗ್ರೆಸ್ ನಾಯಕ ರಶೀದ್ ಆಲ್ವಿ ಪ್ರಶ್ನಿಸಿದ್ದಾರೆ.
1984ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಸರಕಾರದಡಿ ನಡೆದಿದ್ದ ಆಪರೇಷನ್ ಬ್ಲ್ಯೂಸ್ಟಾರ್ ಅನ್ನು 50 ವರ್ಷಗಳ ಬಳಿಕ ಚಿದಂಬರಂ ಏಕೆ ಟೀಕಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ಆಲ್ವಿ, ಅವರ ಹೇಳಿಕೆಯು ದುರದೃಷ್ಟಕರವಾಗಿದೆ ಎಂದರು.
ಶನಿವಾರ ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಖುಷ್ವಂತ್ ಸಿಂಗ್ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಸಂದರ್ಭ ಚಿದಂಬರಂ, ಅಮೃತಸರದ ಸ್ವರ್ಣ ಮಂದಿರವನ್ನು ಭಯೋತ್ಪಾಕರಿಂದ ಮರಳಿ ಪಡೆಯಲು ಆಪರೇಷನ್ ಬ್ಲ್ಯೂಸ್ಟಾರ್ ನಡೆಸಿದ್ದು ತಪ್ಪು ನಿರ್ಧಾರವಾಗಿತ್ತು. ಇದಕ್ಕಾಗಿ ಇಂದಿರಾ ಗಾಂಧಿಯವರು ತನ್ನ ಜೀವವನ್ನೇ ತೆರುವಂತಾಯಿತು ಎಂದು ಹೇಳಿದ್ದರು.
ಬ್ಲ್ಯೂಸ್ಟಾರ್ಗೆ ಇಂದಿರಾ ಗಾಂಧಿ ಹೊಣೆಯಾಗಿದ್ದರು ಮತ್ತು ಅದಕ್ಕಾಗಿ ಅವರು ತನ್ನ ಜೀವವನ್ನೇ ತೆರಬೇಕಾಯಿತು ಎಂದು ಈಗ ಹೇಳುವ ಅಗತ್ಯವೇನಿತ್ತು? ಕಳೆದ 11 ವರ್ಷಗಳಲ್ಲಿಯ ಬಿಜೆಪಿಯ ನ್ಯೂನತೆಗಳನ್ನು ಎತ್ತಿ ತೋರಿಸುವ ಬದಲು ಚಿದಂಬರಂ ಇದನ್ನೇಕೆ ಮಾಡುತ್ತಿದ್ದಾರೆ ಎನ್ನುವುದು ತನಗೆ ಅರ್ಥವಾಗಿಲ್ಲ. ಬಿಜೆಪಿ ಹೇಗೆ ಇಡೀ ದೇಶವನ್ನೇ ಹಾಳು ಮಾಡುತ್ತಿದೆ ಎನ್ನುವುದನ್ನು ಎತ್ತಿ ತೋರಿಸುವ ಬದಲು ಅವರು ಕಾಂಗ್ರೆಸ್ ಪಕ್ಷದ ನ್ಯೂನತೆಗಳನ್ನು ಬೆಟ್ಟು ಮಾಡುತ್ತಿದ್ದಾರೆ. ಇದು ಅನ್ಯಾಯ ಎಂದು ಆಲ್ವಿ ಹೇಳಿದರು.







