ಮುಖ್ಯ ಚುನಾವಣಾ ಆಯುಕ್ತರ ಪುತ್ರಿ ಈಗ ನೊಯ್ಡಾದ ಮೊದಲ ಮಹಿಳಾ ಜಿಲ್ಲಾಧಿಕಾರಿ

ಮೇಧಾ ರೂಪಮ್ (Photo credit:X/@MedhaRoopam)
ನೊಯ್ಡಾ: 2014ರ ತಂಡದ ಐಎಎಸ್ ಅಧಿಕಾರಿ ಮೇಧಾ ರೂಪಮ್ ಅವರು ಗೌತಮ ಬುದ್ಧ ನಗರದ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದು,ಬುಧವಾರ ಗ್ರೇಟರ್ ನೊಯ್ಡಾದ ಸೂರಜ್ಪುರದಲ್ಲಿಯ ಕಲೆಕ್ಟರೇಟ್ ಕಚೇರಿಯ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ರೂಪಮ್ ಅವರ ತಂದೆ,ಕೇರಳ ಕೇಡರ್ನ ನಿವೃತ್ತ ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾರೆ.
ರೂಪಮ್ ಪತಿ ಮನೀಶ ಬನ್ಸಾಲ್ ಕೂಡ 2014ರ ತಂಡದ ಐಎಎಸ್ ಅಧಿಕಾರಿಯಾಗಿದ್ದು, ಸಹಾರನ್ಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅ.21, 1990ರಂದು ಆಗ್ರಾದಲ್ಲಿ ಜನಿಸಿದ್ದ ರೂಪಮ್ ಕೇರಳದಲ್ಲಿ ಶಾಲಾ ಶಿಕ್ಷಣದ ಬಳಿಕ ಸೈಂಟ್ ಸ್ಟೀಫನ್ಸ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪಡೆದಿದ್ದಾರೆ. ರಾಷ್ಟೀಯ ಮಟ್ಟದ ರೈಫಲ್ ಶೂಟರ್ ಕೂಡ ಆಗಿರುವ ಅವರು 10 ಮೀ.ಏರ್ ರೈಫಲ್ ಸ್ಪರ್ಧೆಯಲ್ಲಿ ರಾಜ್ಯ ದಾಖಲೆಯನ್ನು ಹೊಂದಿದ್ದಾರೆ.
ರೂಪಮ್ ಕಾಸಗಂಜ್ ಜಿಲ್ಲಾಧಿಕಾರಿಯಾಗಿದ್ದಾಗ ಸೆ.2024ರಲ್ಲಿ ನೆರೆಪೀಡಿತ ಗ್ರಾಮೀಣ ಪ್ರದೇಶಗಳನ್ನು ಟ್ರ್ಯಾಕ್ಟರ್ನಲ್ಲಿ ಕುಳಿತುಕೊಂಡು ಪರಿಶೀಲಿಸುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.







