"ಅಸ್ಪೃಶ್ಯರನ್ನು ಸಮಾನ ಪ್ರಜೆಗಳನ್ನಾಗಿ ಪರಿವರ್ತಿಸಿದ ಸಂವಿಧಾನ": ಆಕ್ಸ್ಫರ್ಡ್ ವಿವಿಯ ಭಾಷಣದಲ್ಲಿ ಜಾತಿಯ ಕುರಿತ ಸತ್ಯಗಳನ್ನು ಬಿಚ್ಚಿಟ್ಟ ಸಿಜೆಐ ಗವಾಯಿ

ಬಿ.ಆರ್.ಗವಾಯಿ | PC : X
ಹೊಸದಿಲ್ಲಿ: ‘ಹಲವಾರು ದಶಕಗಳ ಹಿಂದೆ ಭಾರತದ ಕೋಟ್ಯಂತರ ನಾಗರಿಕರನ್ನು ‘ಅಸ್ಪೃಶ್ಯರು’ ಎಂದು ಕರೆಯಲಾಗಿತ್ತು. ಅವರು ಅಶುದ್ಧರು ಎಂದು ಅವರಿಗೆ ಹೇಳಲಾಗಿತ್ತು. ಅವರು ಮುಖ್ಯವಾಹಿನಿಗೆ ಸೇರಿದವರಲ್ಲ ಎಂದು ಹೇಳಲಾಗಿತ್ತು. ಅವರಿಗೆ ತಮ್ಮ ಪರವಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಆದರೆ ಇಂದು ನಾವು ಇಲ್ಲಿದ್ದೇವೆ-ಅದೇ ಜನರಿಗೆ ಸೇರಿದ ವ್ಯಕ್ತಿಯೋರ್ವರು ದೇಶದ ನ್ಯಾಯಾಂಗದ ಅತ್ಯುನ್ನತ ಹುದ್ದೆಯನ್ನು ಹೊಂದಿರುವವರಾಗಿ ಇಲ್ಲಿ ಬಹಿರಂಗವಾಗಿ ಮಾತನಾಡುತ್ತಿದ್ದಾರೆ’; ಇವು ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ಬಿ.ಆರ್.ಗವಾಯಿ ಅವರು ಆಕ್ಸ್ಫರ್ಡ್ ವಿವಿಯಲ್ಲಿ ತನ್ನ ಭಾಷಣದ ಆರಂಭದಲ್ಲಿ ಹೇಳಿದ ಮಾತುಗಳು.
ತನ್ನ ಭಾಷಣದಲ್ಲಿ ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಅವರ ‘ಕ್ಯಾನ್ ದಿ ಸಬಲ್ಟರ್ನ್ ಸ್ಪೀಕ್?(ತಳಮಟ್ಟದವರು ಮಾತನಾಡಬಲ್ಲರೇ?)’ ಕೃತಿಯನ್ನು ಉಲ್ಲೇಖಿಸಿದ ನ್ಯಾ.ಗವಾಯಿ, ‘ಅದಕ್ಕೆ ನಾನು ನನ್ನನ್ನೇ ಉದಾಹರಣೆಯಾಗಿ ನೀಡುತ್ತೇನೆ. ಹೌದು ತಳಮಟ್ಟದವರು ಮಾತನಾಡಬಲ್ಲರು ಮತ್ತು ಅವರು ಎಂದಿನಿಂದಲೂ ಮಾತನಾಡುತ್ತಿದ್ದಾರೆ. ಅವರು ಮಾತನಾಡಬಲ್ಲರೇ ಎನ್ನುವುದು ಈಗ ಪ್ರಶ್ನೆಯಲ್ಲ, ಸಮಾಜವು ಅದನ್ನು ನಿಜಕ್ಕೂ ಆಲಿಸುತ್ತಿದೆಯೇ ಎನ್ನುವುದು ಈಗ ಪ್ರಶ್ನೆಯಾಗಿದೆ ಎಂದು ಹೇಳಿದರು.
ಸಂವಿಧಾನವನ್ನು ಶ್ಲಾಘಿಸಿದ ಅವರು, ಭಾರತದ ಸಂವಿಧಾನವು ಇದನ್ನೇ ಮಾಡಿದೆ. ಅದು ಭಾರತದ ಜನರಿಗೆ ಅವರು ಮುಖ್ಯವಾಹಿನಿಗೆ ಸೇರಿದ್ದಾರೆ, ಅವರು ತಮಗಾಗಿ ಮಾತನಾಡಬಹುದು ಮತ್ತು ಸಮಾಜ ಹಾಗೂ ಅಧಿಕಾರದ ಪ್ರತಿಯೊಂದೂ ಕ್ಷೇತ್ರದಲ್ಲಿ ಅವರಿಗೆ ಸಮಾನ ಸ್ಥಾನವಿದೆ ಎಂದು ಹೇಳಿತ್ತು ಎಂದರು.
‘ಭಾರತದ ಅತ್ಯಂತ ದುರ್ಬಲ ಪ್ರಜೆಗಳಿಗೆ ಸಂವಿಧಾನವು ಕೇವಲ ಕಾನೂನು ಸನ್ನದು ಅಥವಾ ರಾಜಕೀಯ ಚೌಕಟ್ಟು ಅಲ್ಲ. ಅದು ಭಾವನೆ, ಜೀವನಾಡಿ, ಶಾಯಿಯಲ್ಲಿ ಕೆತ್ತಿದ ಮೌನ ಕ್ರಾಂತಿಯಾಗಿದೆ ಎಂದು ಹೇಳಲು ಇಂದು ನಾನು ಆಕ್ಸ್ಫರ್ಡ್ ಯೂನಿಯನ್ನಲ್ಲಿ ನಿಮ್ಮ ಮುಂದೆ ನಿಂತಿದ್ದೇನೆ. ಮುನ್ಸಿಪಲ್ ಶಾಲೆಯಿಂದ ಭಾರತದ ಮುಖ್ಯ ನ್ಯಾಯಾಧೀಶರ ಹುದ್ದೆಯವರೆಗೆ ನನ್ನ ಸ್ವಂತ ಪಯಣದಲ್ಲಿ ಅದು ಮಾರ್ಗದರ್ಶಕ ಶಕ್ತಿಯಾಗಿದೆ’ ಎಂದು ನ್ಯಾ.ಗವಾಯಿ ಹೇಳಿದರು.
ಸಂವಿಧಾನವು ಒಂದು ಸಾಮಾಜಿಕ ದಾಖಲೆಯಾಗಿದೆ. ಅದು ಜಾತಿ, ಬಡತನ, ಹೊರಗಿಡುವಿಕೆ ಮತ್ತು ಅನ್ಯಾಯದ ಕ್ರೂರ ಸತ್ಯಗಳಿಂದ ತನ್ನ ನೋಟವನ್ನು ಬದಲಿಸುವುದಿಲ್ಲ. ಆಳವಾದ ಅಸಮಾನತೆಯಿಂದ ಬಳಲುತ್ತಿರುವ ನೆಲದಲ್ಲಿ ಎಲ್ಲರೂ ಸಮಾನರು ಎಂಬ ಸೋಗನ್ನು ಅದು ಹಾಕುವುದಿಲ್ಲ. ಬದಲಿಗೆ ಅದು ಮಧ್ಯಪ್ರವೇಶಿಸಲು, ಲಿಖಿತವನ್ನು ಪುನಃ ಬರೆಯಲು,ಅಧಿಕಾರವನ್ನು ಮರುನಿಷ್ಕರ್ಷಿಸಲು ಮತ್ತು ಘನತೆಯನ್ನು ಮರುಸ್ಥಾಪಿಸಲು ಧೈರ್ಯವನ್ನು ಮಾಡುತ್ತದೆ ಎಂದು ಹೇಳಿದ ನ್ಯಾ.ಗವಾಯಿ, ಸಂವಿಧಾನವು ತನ್ನೊಳಗೆ ಎಂದಿಗೂ ಇತರರು ಆಲಿಸಲು ಬಯಸದವರ ಹೃದಯ ಬಡಿತಗಳನ್ನು ಹಾಗೂ ಸಮಾನತೆಯ ಕೇವಲ ಭರವಸೆ ನೀಡದೇ ಅದನ್ನು ಅನುಸರಿಸುವ ದೇಶದ ದೃಷ್ಟಿಕೋನವನ್ನು ಹೊಂದಿದೆ. ಅದು ಹಕ್ಕುಗಳ ರಕ್ಷಣೆ ಮಾತ್ರವಲ್ಲ, ಅದನ್ನು ಸಕ್ರಿಯವಾಗಿ ಉನ್ನತೀಕರಿಸುವುದನ್ನು, ದೃಢಪಡಿಸುವುದನ್ನು ಸರಕಾರಕ್ಕೆ ಕಡ್ಡಾಯಗೊಳಿಸುತ್ತದೆ ಎಂದರು.
ಭಾರತದ ಸಂವಿಧಾನ ರಚನೆ ಸಮಯದಲ್ಲಿ ಗಮನಾರ್ಹವಾದ, ಆದರೆ ಹೆಚ್ಚಾಗಿ ನಿರ್ಲಕ್ಷಿಸಲ್ಪಟ್ಟಿದ್ದ ಸತ್ಯವೊಂದು ಹೊರಹೊಮ್ಮಿತ್ತು ಎಂದ ಅವರು, ದೇಶದ ಅತ್ಯಂತ ದುರ್ಬಲ ಸಾಮಾಜಿಕ ಗುಂಪುಗಳಲ್ಲಿ ಹಲವು ಕೇವಲ ಸಾಂವಿಧಾನಿಕ ಕಳವಳಗಳ ವಿಷಯವಾಗಿರದೆ ಅದರ ರಚನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವು ಎಂದು ಹೇಳಿದರು.
ದಲಿತರು ಮತ್ತು ಆದಿವಾಸಿಗಳಿಂದ ಹಿಡಿದು ಮಹಿಳೆಯರು, ಅಲ್ಪಸಂಖ್ಯಾತರು, ದೈಹಿಕ ಅಂಗವಿಕಲರು ಮತ್ತು ಒಂದು ಕಾಲದಲ್ಲಿ ‘ಕ್ರಿಮಿನಲ್ ಬುಡಕಟ್ಟುಗಳು’ ಎಂದು ಅನ್ಯಾಯವಾಗಿ ಹಣೆಪಟ್ಟಿ ಹೊತ್ತವರವರೆಗೆ ಸಂವಿಧಾನ ಸಭೆಯಲ್ಲಿ ಅವರ ಉಪಸ್ಥಿತಿಯು, ವಿಶಾಲವಾದ ಸಾಂವಿಧಾನಿಕ ಪರಿಕಲ್ಪನೆಯಲ್ಲಿ ,ನ್ಯಾಯಕ್ಕಾಗಿ ಸಾಮೂಹಿಕ ಬೇಡಿಕೆಯಾಗಿತ್ತು. ಈ ಗುಂಪುಗಳು ಶತಮಾನಗಳ ಕಾಲ ದಬ್ಬಾಳಿಕೆ,ಬಹಿಷ್ಕಾರ ಮತ್ತು ಮೌನವನ್ನು ಸಹಿಸಿಕೊಂಡಿದ್ದವು. ಅವರ ಕರೆಯು ನವ ಭಾರತದಲ್ಲಿ ಮನ್ನಣೆ, ಘನತೆ ಮತ್ತು ರಕ್ಷಣೆಗಾಗಿ ಆಗಿತ್ತು. ಅವರು ದಾನವನ್ನು ಬಯಸಿರಲಿಲ್ಲ,ಆದರೆ ಮುಕ್ತ ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ನ್ಯಾಯವಾದ ಸ್ಥಾನಕ್ಕಾಗಿ ಬಯಸಿದ್ದರು ಎಂದು ನ್ಯಾ.ಗವಾಯಿ ಹೇಳಿದರು.







