ಕರೂರ್ ಕಾಲ್ತುಳಿತದ ಬಗ್ಗೆ ವದಂತಿ ಹರಡಬೇಡಿ: ಮುಖ್ಯಮಂತ್ರಿ ಸ್ಟಾಲಿನ್

ಎಂ.ಕೆ. ಸ್ಟಾಲಿನ್ | Photo Credit :PTI
ಚೆನ್ನೈ, ಸೆ. 29: ಕರೂರ್ ನಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆ ಕುರಿತು ಸಾಮಾಜಿಕ ಮಾದ್ಯಮದಲ್ಲಿ ವದಂತಿ ಹರಡುವುದರ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಸೆಪ್ಟಂಬರ್ 27ರಂದು ನಡೆದ ದುರ್ಘಟನೆಯಲ್ಲಿ 41 ಜನರು ಸಾವನ್ನಪ್ಪಿರುವುದು ದುಃಖದ ವಿಚಾರವಾಗಿದೆ. ದುರ್ಘಟನೆಯಲ್ಲಿ ಮೃತಪಟ್ಟವರನ್ನು ಒಂದು ಪಕ್ಷಕ್ಕೆ ಸೇರಿದವರು ಎಂದು ನೋಡಬಾರದು. ಬದಲಿಗೆ ಅವರನ್ನು ತಮಿಳರು ಎಂದು ನೋಡಬೇಕು ಎಂದು ಅವರು ಹೇಳಿದ್ದಾರೆ.
‘‘ಕರೂರಿನಲ್ಲಿ ನಡೆದಿರುವುದು ಒಂದು ದೊಡ್ಡ ದುರಂತ. ಇದರಿಂದ ನನ್ನ ಹೃದಯ ದುಃಖತಪ್ತವಾಗಿದೆ. ಮಾಹಿತಿ ದೊರಕಿದ ಕೂಡಲೇ ಜಿಲ್ಲಾಡಳಿತವನ್ನು ಸಜ್ಜುಗೊಳಿಸಲಾಯಿತು. ನನಗೆ ಚೆನ್ನೈಯಲ್ಲಿ ಇರಲು ಸಾಧ್ಯವಾಗಲಿಲ್ಲ. ಸಂತ್ರಸ್ತರನ್ನು ಸಂತೈಸಿಸಲು ನಾನು ಕೂಡಲೇ ಕರೂರಿಗೆ ಧಾವಿಸಿದೆ’’ ಎಂದು ಸ್ಟಾಲಿನ್ ತನ್ನ ಅಧಿಕೃತ ‘ಎಕ್ಸ್’ ಖಾತೆಯ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಸಾಮಾಜಿಕ ಮಾದ್ಯಮದ ಪೋಸ್ಟ್ ಗಳನ್ನು ತಾನು ಗಮನಿಸುತ್ತಿದ್ದೇನೆ ಎಂದು ಹೇಳಿದ ಸ್ಟಾಲಿನ್, ಈ ಘಟನೆ ಕುರಿತು ಕೆಲವು ಜನರು ವದಂತಿಗಳನ್ನು ಹರಡುತ್ತಿರುವುದು ಹಾಗೂ ನಿಂದನೆಯಲ್ಲಿ ತೊಡಗಿರುವುದು ವಿಷಾದಕರ ಎಂದಿದ್ದಾರೆ.
‘‘ಕರೂರಿನಲ್ಲಿ ನಡೆದ ದುರಂತದ ಬಗ್ಗೆ ವದಂತಿಗಳನ್ನು ಹರಡಬೇಡಿ, ನಿಂದನೆಯಲ್ಲಿ ತೊಡಗಬೇಡಿ. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ವರ್ತಿಸಿ’’ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.





