ಈಶಾನ್ಯದಲ್ಲಿ ಚೀನಾದ ಭಾರತ ವಿರೋಧಿ ಆ್ಯಪ್: ನಿಷೇಧಕ್ಕೆ ಕೇಂದ್ರದ ಚಿಂತನೆ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಭಾರತ ವಿರೋಧಿ ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಹರಡಲು ಬಳಕೆದಾರರಿಗೆ ಹಣ ಮತ್ತು ಇತರ ಆಮಿಷಗಳನ್ನೊಡ್ಡುವ ‘ರೆಡ್ನೋಟ್’ ಮೊಬೈಲ್ ಆ್ಯಪ್ ನ್ನು ಬಳಸಿಕೊಳ್ಳುವ ಮೂಲಕ ಚೀನಾ ಈಶಾನ್ಯ ಭಾರತದ ವಿರುದ್ಧ ಸಂಚು ರೂಪಿಸುತ್ತಿರುವುದನ್ನು ಗುಪ್ತಚರ ಸಂಸ್ಥೆಗಳು ಬಯಲಿಗೆಳೆದಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಗುಪ್ತಚರ ಸಂಸ್ಥೆಗಳ ವರದಿಯನ್ನು ಅನುಸರಿಸಿ ಸರಕಾರವು ಅರುಣಾಚಲ ಪ್ರದೇಶ,ಅಸ್ಸಾಂ ಮತ್ತು ಮಣಿಪುರ ಸೇರಿದಂತೆ ಹಲವು ಈಶಾನ್ಯ ರಾಜ್ಯಗಳ ನಿವಾಸಿಗಳನ್ನು ಗುರಿಯಾಗಿಸಿಕೊಂಡಿರುವ ಈ ಆನ್ಲೈನ್ ಆ್ಯಪ್ ನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ರೆಡ್ನೋಟ್ ಸಾಮಾನ್ಯ ಆ್ಯಪ್ನಂತೆ ಕಂಡು ಬಂದಿತ್ತಾದರೂ ಸೂಕ್ಷ್ಮ ವಿಶ್ಲೇಷಣೆಯು ಅದು ನಕಲಿ ದಾಖಲೆಗಳು, ಭಾರತದ ವಿವಾದಿತ ನಕಾಶೆಗಳು, ತಿರುಚಲ್ಪಟ್ಟ ವೀಡಿಯೊಗಳು ಮತ್ತು ಕೆಲವು ಪಾಕಿಸ್ತಾನ ಪರ ವಿಷಯಗಳಿಂದ ತುಂಬಿರುವುದನ್ನು ಬಹಿರಂಗಗೊಳಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿದವು.
‘ದಿಲ್ಲಿ ತುಂಬ ದೂರದಲ್ಲಿದೆ’ ಎಂಬಂತಹ ಸಂದೇಶಗಳನ್ನು ಪೋಸ್ಟ್ ಮಾಡುವ ಮೂಲಕ ಭಾರತದ ಬಗ್ಗೆ ಯುವಜನರಲ್ಲಿ ಅಪನಂಬಿಕೆಯನ್ನು ಸೃಷ್ಟಿಸುವ ಉದ್ದೇಶದೊಂದಿಗೆ ರೆಡ್ನೋಟ್ ಮೊಬೈಲ್ ಅಪ್ಲಿಕೇಷನ್ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈಶಾನ್ಯ ರಾಜ್ಯಗಳ ನಿವಾಸಿಗಳಿಗೆ ಪ್ರಯೋಜನಕಾರಿ ಎಂದು ಕಂಡುಬರುವಂತೆ ‘ಚೀನಾ ಹತ್ತಿರದಲ್ಲಿದೆ’ ಎಂಬಂತಹ ಹೇಳಿಕೆಗಳನ್ನು ಅದು ಪೋಸ್ಟ್ ಮಾಡುತ್ತಿದೆ ಎನ್ನುವುದನ್ನೂ ಗುಪ್ತಚರ ಸಂಸ್ಥೆಗಳು ಕಂಡುಕೊಂಡಿವೆ ಎಂದು ಈ ಮೂಲಗಳು ತಿಳಿಸಿವೆ.
ಈಶಾನ್ಯ ರಾಜ್ಯಗಳ ಜನರ ಮೇಲೆ ಪ್ರಭಾವ ಬೀರಲು ಚೀನಾ ಮತ್ತು ಪಾಕಿಸ್ತಾನದ ತಜ್ಞರು ಈ ಆ್ಯಪ್ನ್ನು ಬಿಡುಗಡೆ ಮಾಡಿದ್ದಾರೆ ಎಂದು ಗುಪ್ತಚರ ಮೂಲಗಳು ಶಂಕಿಸಿವೆ.
ದೇಶದ ಭದ್ರತೆಗೆ ಸಂಬಂಧಿಸಿದಂತೆ ಭಾರತದ ಈಶಾನ್ಯಭಾಗದ ಭೂರಾಜಕೀಯ ಮಹತ್ವವನ್ನು ಗಮನಿಸಿದರೆ ಚೀನಾ ಈ ಹಿಂದೆ ಆಫ್ರಿಕಾ,ತೈವಾನ ಮತ್ತು ಹಾಂಗ್ಕಾಂಗ್ಗಳಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಬಳಸಿದ್ದ ಕಾರ್ಯತಂತ್ರವನ್ನೇ ಇಲ್ಲಿಯೂ ಬಳಸುತ್ತಿದೆ ಎಂದು ಹಿರಿಯ ಭದ್ರತಾ ಅಧಿಕಾರಿಯೋರ್ವರು ಹೇಳಿದರು.
ಈಗ ಚೀನಾದ ದುರುದ್ದೇಶ ಬೆಳಕಿಗೆ ಬಂದಿರುವುದರಿಂದ ಭಾರತವು ಈ ಹಿಂದೆ ರಾಷ್ಟ್ರೀಯ ಸುರಕ್ಷತೆಯ ಕಾರಣವನ್ನೊಡ್ಡಿ ಟಿಕ್ಟಾಕ್, ಶೇರ್ಇಟ್ ಮತ್ತು ಯುಸಿ ಬ್ರೌಸರ್ನಂತಹ ಜನಪ್ರಿಯ ಚೀನಿ ಆ್ಯಪ್ಗಳನ್ನು ನಿಷೇಧಿಸಿದಂತೆ ರೆಡ್ನೋಟ್ನ್ನೂ ನಿಷೇಧಿಸಲು ಅಗತ್ಯ ಪ್ರಕ್ರಿಯೆಯನ್ನು ಸರಕಾರವು ಆರಂಭಿಸಿದೆ ಎಂದು ಮೂಲಗಳು ತಿಳಿಸಿದವು.
ಚೀನಾ ಕಳೆದ ಹಲವಾರು ವರ್ಷಗಳಿಂದಲೂ ಅರುಣಾಚಲ ಪ್ರದೇಶದ ಮೇಲೆ ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುತ್ತಲೇ ಬಂದಿದೆ ಮತ್ತು ಅದನ್ನು ತನ್ನ ನಕ್ಷೆಗಳಲ್ಲಿ ತನ್ನ ನಿಯಂತ್ರಣದಲ್ಲಿರುವ ‘ದಕ್ಷಿಣ ಟಿಬೆಟ್’ನ ಭಾಗ ಎಂದು ಬಿಂಬಿಸುತ್ತಿದೆ. ಇದಕ್ಕೆ ಭಾರತವು ತೀವ್ರ ಆಕ್ಷೇಪಗಳನ್ನು ವ್ಯಕ್ತಪಡಿಸಿದೆ.
ಗುಪ್ತಚರ ಮಾಹಿತಿಗಳನ್ನು ಸಂಗ್ರಹಿಸಲು,ಯುವಜನರ ಮೇಲೆ ಪ್ರಭಾವ ಬೀರಲು ಮತ್ತು ತನ್ನ ವಿರುದ್ಧ ಪ್ರಚಾರ ಸಮರವನ್ನು ಸಾರಲು ಚೀನಾ ನಿರುಪದ್ರವಕಾರಿ ಎಂದು ತೋರುವ ಮೊಬೈಲ್ ಆ್ಯಪ್ಗಳನ್ನು ಬಳಸುತ್ತಿದೆ ಎಂದು ಭಾರತವು ಹಿಂದಿನಿಂದಲೂ ಆರೋಪಿಸುತ್ತಲೇ ಬಂದಿದೆ. ಈಶಾನ್ಯ ರಾಜ್ಯಗಳ ಜನರಲ್ಲಿ ಪ್ರತ್ಯೇಕತಾವಾದಿ ಭಾವನೆಗಳನ್ನು ಹುಟ್ಟುಹಾಕಲು ಪ್ರಚೋದನಾಕಾರಿ ಸಂದೇಶಗಳನ್ನು ರವಾನಿಸುವ ಮೂಲಕ ಮಣಿಪುರ,ಅಸ್ಸಾಂ ಮತ್ತು ನಾಗಾಲ್ಯಾಂಡ್ ನಂತಹ ರಾಜ್ಯಗಳಲ್ಲಿಯ ಜನಾಂಗೀಯ ಭಿನ್ನತೆಗಳು ಮತ್ತು ಪ್ರಾದೇಶಿಕ ಉದ್ವಿಗ್ನತೆಯನ್ನು ಬಳಸಿಕೊಳ್ಳಲು ಚೀನಾ ಪದೇ ಪದೇ ತಪ್ಪು ಮಾಹಿತಿಗಳನ್ನು ಹರಡುತ್ತಿದೆ ಎಂದೂ ಸರಕಾರವು ಗಮನಿಸಿದೆ.
ಚೀನಾದ ಸರಕಾರಿ ಮಾಧ್ಯಮವಾಗಿರುವ ಗ್ಲೋಬಲ್ ಟೈಮ್ಸ್ ಕೂಡ ಭಾರತದ ನೀತಿಗಳನ್ನು ಗುರಿಯಾಗಿಸಿಕೊಂಡು ಆಕ್ರಮಣಕಾರಿ ಸಂಪಾದಕೀಯಗಳನ್ನು ಪ್ರಕಟಿಸುತ್ತಿರುತ್ತದೆ.







