ಪ್ರಯಾಣ ನಿಯಮ ಉಲ್ಲಂಘನೆ | ಜಮ್ಮು–ಕಾಶ್ಮೀರದಲ್ಲಿ ಚೀನೀ ಪ್ರಜೆಯ ಬಂಧನ

ಹು ಕಾಂಗ್ಟೈ (Photo: X/@idrwalerts)
ಶ್ರೀನಗರ: ಲಡಾಖ್ ಮತ್ತು ಜಮ್ಮು–ಕಾಶ್ಮೀರದಲ್ಲಿ ಅನುಮತಿಯಿಲ್ಲದೆ ಎರಡು ವಾರಗಳಿಗೂ ಹೆಚ್ಚು ಕಾಲ ಸಂಚರಿಸಿದ್ದ ಚೀನಾದ 29 ವರ್ಷದ ಹು ಕಾಂಗ್ಟೈ ಎಂಬ ವ್ಯಕ್ತಿಯನ್ನು ಭದ್ರತಾ ಪಡೆಗಳು ಬಂಧಿಸಿದೆ.
ಈ ಘಟನೆ ಶ್ರೀನಗರದಲ್ಲಿ ವಿದೇಶಿ ಪ್ರವಾಸಿಗರ ವಾಸ್ತವ್ಯದ ಮೇಲೆ ನಿಗಾವಹಿಸುವ ವ್ಯವಸ್ಥೆಯ ಬಗ್ಗೆ ಗಂಭೀರ ಲೋಪಗಳನ್ನು ಬಹಿರಂಗಪಡಿಸಿದ್ದು, ಶ್ರೀನಗರದ ಹಲವು ಹೋಟೆಲ್ಗಳು ಮತ್ತು ಹೌಸ್ಬೋಟ್ಗಳ ಮೇಲೆ ಪೊಲೀಸರು ದೊಡ್ಡ ಮಟ್ಟದ ಕಾರ್ಯಾಚರಣೆ ಮಾಡಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಈ ಪ್ರದೇಶದಲ್ಲಿ ಸೇನೆ ಅಸಾಮಾನ್ಯ ಇಂಟರ್ನೆಟ್ ಸಂವಹನವೊಂದನ್ನು ತಡೆದಿತ್ತು. ಈ ಸಂವಹನವು ವಿದೇಶಿಯೊಬ್ಬರ ಸಂಚಲನದ ಬಗ್ಗೆ ಭದ್ರತಾ ಸಂಸ್ಥೆಗಳಿಗೆ ಅನುಮಾನಾಸ್ಪದವಾದ ಮೊದಲ ಸುಳಿವು ನೀಡಿತು. ಗುವಾಂಗ್ಡಾಂಗ್ ಪ್ರಾಂತ್ಯದ ಶೆನ್ಜೆನ್ ಮೂಲದ ಚೀನಾದ ಪ್ರಜೆ ಹು ಕಾಂಗ್ಟೈ, ನವೆಂಬರ್ 19ರಂದು ಪ್ರವಾಸಿ ವೀಸಾ ಮೇಲೆ ದಿಲ್ಲಿಗೆ ಬಂದಿದ್ದು, ಅವರಿಗೆ ದಿಲ್ಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಬೌದ್ಧ ತಾಣಗಳಿಗೆ ಮಾತ್ರ ಭೇಟಿ ನೀಡಲು ಅನುಮತಿ ನೀಡಲಾಗಿತ್ತು. ಆದಾಗ್ಯೂ, ಅವರು ಈ ನಿಯಮಗಳನ್ನು ಉಲ್ಲಂಘಿಸಿ ಲಡಾಖ್ ಹಾಗೂ ಕಾಶ್ಮೀರಕ್ಕೆ ಪ್ರವೇಶಿಸಿದ್ದರು.
ತನಿಖೆಯಲ್ಲಿ ಹು ಅವರ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ ಸಿಆರ್ಪಿಎಫ್ ನಿಯೋಜನೆಗಳು, ಆರ್ಟಿಕಲ್ 370, ಕಾಶ್ಮೀರ ಭದ್ರತೆಗೆ ಸಂಬಂಧಿಸಿದ ಹುಡುಕಾಟಗಳು ಪತ್ತೆಯಾಗಿವೆ. ಜೊತೆಗೆ ಸ್ಥಳೀಯ ಮಾರುಕಟ್ಟೆಯಿಂದ ಅವರು ಭಾರತೀಯ ಸಿಮ್ ಕಾರ್ಡ್ ಅನ್ನು ಪಡೆದುಕೊಂಡಿರುವುದು ಹೊರಬಿದ್ದಿದೆ. ಇದು ಅವರ ಸಂಚಲನದ ಬಗ್ಗೆ ಹೆಚ್ಚಿನ ಅನುಮಾನಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆದಿರುವ ಹು ಕಾಂಗ್ಟೈ, ಯುಎಸ್, ನ್ಯೂಝಿಲೆಂಡ್, ಬ್ರೆಝಿಲ್, ಫಿಜಿ ಮತ್ತು ಹಾಂಗ್ ಕಾಂಗ್ ಸೇರಿದಂತೆ ಅನೇಕ ದೇಶಗಳಿಗೆ ಈ ಹಿಂದೆ ಪ್ರಯಾಣಿಸಿರುವುದು ದಾಖಲೆಯಲ್ಲಿದೆ. ಅವರ ವಿರುದ್ಧದ ಪ್ರಕರಣ ವೀಸಾ ನಿಯಮ ಉಲ್ಲಂಘನೆಗೆ ಸಂಬಂಧಿಸಿದ್ದು, ಅವರನ್ನು ಶೀಘ್ರವೇ ಗಡೀಪಾರು ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಶ್ರೀನಗರದ ಹೋಟೆಲ್ಗಳು, ಹೋಂಸ್ಟೇಗಳು ಮತ್ತು ಹೌಸ್ಬೋಟ್ಗಳ ಮೇಲೆ ಪೊಲೀಸರು ದಾಳಿ:
ಹು ಬಂಧನದ ನಂತರ, ವಿದೇಶಿ ಪ್ರಜೆಗಳ ವಾಸ್ತವ್ಯವನ್ನು ಕಡ್ಡಾಯವಾಗಿ ದಾಖಲಿಸುವ ಫಾರ್ಮ್-ಸಿ ಅನ್ನು ಸಲ್ಲಿಸಲು ವಿಫಲವಾದ ಕಾರಣಕ್ಕಾಗಿ ಜಮ್ಮು ಕಾಶ್ಮೀರ ಪೊಲೀಸರು ಶ್ರೀನಗರದ ಹಲವು ವಸತಿ ಸೌಲಭ್ಯಗಳ ಮೇಲೆ ದೊಡ್ಡ ಮಟ್ಟದ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಈವರೆಗೆ ಐದು ಎಫ್ಐಆರ್ಗಳು ದಾಖಲೆಯಾಗಿವೆ.
ಪೊಲೀಸರ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾ, ಇಸ್ರೇಲ್, ರೊಮೇನಿಯಾ ಮತ್ತು ಸ್ಪೇನ್ ದೇಶಗಳಿಂದ ಬಂದಿದ್ದ ಪ್ರವಾಸಿಗರ ವಾಸ್ತವ್ಯವೂ ಸರಿಯಾದ ದಾಖಲೆ ಪ್ರಕ್ರಿಯೆ ಇಲ್ಲದೆ ನಡೆದಿರುವುದು ಪತ್ತೆಯಾಗಿದೆ.
ಹು ಕಾಂಗ್ಟೈ ಎರಡು ವಾರಗಳ ಕಾಲ ಅಧಿಕಾರಿಗಳ ಗಮನಕ್ಕೆ ಬಾರದೆ ಲಡಾಖ್ ಮತ್ತು ಕಾಶ್ಮೀರದಲ್ಲಿ ಸಂಚರಿಸಿದ್ದ ಸಂಗತಿ ಗಂಭೀರವಾಗಿ ಪರಿಗಣಿಸಲ್ಪಟ್ಟಿದ್ದು, ಭವಿಷ್ಯದಲ್ಲಿ ಇಂತಹ ಉಲ್ಲಂಘನೆಗಳನ್ನು ತಡೆಯಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.







