ಚಿರಾಗ್ ಮುಂದಿನ ಸಿಎಂ ಎಂಬಂತೆ ಬಿಂಬಿಸುವ ಪೋಸ್ಟರ್ ಗಳು ಪಾಟ್ನಾದಲ್ಲಿ ಪ್ರತ್ಯಕ್ಷ ; ಬಿಹಾರ ರಾಜಕಾರಣದಲ್ಲಿ ಹೊಸ ಸಂಚಲನ

PC : X
ಪಾಟ್ನಾ: ಎಲ್ಜೆಪಿ (ರಾಮ್ವಿಲಾಸ್ ಪಾಸ್ವಾನ್) ಪಕ್ಷದ ವರಿಷ್ಠ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿ, ಬಿಹಾರದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲವೆಂದು ಹೇಳಿಕೆ ನೀಡಿದ ಮರುದಿನವೇ ಅವರ ಪಕ್ಷದ ನಾಯಕರು, ಚಿರಾಗ್ ಮುಂದಿನ ಸಿಎಂ ಎಂಬುದಾಗಿ ಬಿಂಬಿಸುವ ಪೋಸ್ಟರ್ ಗಳನ್ನು ಪಾಟ್ನಾದ ವಿವಿಧೆಡೆ ಪ್ರದರ್ಶಿಸಿದ್ದಾರೆ.
ಪಾಟ್ನಾದ ವಿವಿಧೆಡೆ ಸ್ಥಾಪಿಸಲಾಗಿರುವ ಈ ಪೋಸ್ಟರ್ ಗಳು, ಚಿರಾಗ್ ಹಾಗೂ ನೀತಿಶ್ ಅವರ ಮಾತುಕತೆಯ ಛಾಯಾಚಿತ್ರವನ್ನು ಒಳಗೊಂಡಿವೆ. ‘‘ಬಿರುಗಾಳಿಗಳನ್ನು ಎದುರಿಸಿ ನಾವು ಬಿಹಾರವನ್ನು ಅಭಿವೃದ್ಧಿಪಡಿಸಿದ್ದೇವೆ. ಈಗ ನಮ್ಮ ಭವಿಷ್ಯ ನಿಮ್ಮ ಕೈಗಳಲ್ಲಿದೆ’’ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. ‘ ಅಂಕಲ್ ನಿತೀಶ್ ರಿಗೆ, ಈ ‘ಸೋದರಪುತ್ರ(ಚಿರಾಗ್) ನ ಬಗ್ಗೆ ಪೂರ್ಣ ವಿಶ್ವಾಸವಿದೆ. ಬಿಹಾರದ ಸ್ವರೂಪ ಹಾಗೂ ನಡವಳಿಕೆ ಸಮಗ್ರವಾಗಿ ಬದಲಾಗಲಿದೆ. ನಾವು ಭೇಟಿಯಾಗಿದ್ದೇವೆ ಮತ್ತು ಆಶೀರ್ವಾದಗಳನ್ನು ಪಡೆದಿದ್ದೇವೆ’’ ಎಂದು ಬರೆಯಲಾಗಿದೆ.
ಕಳೆದ ತಿಂಗಳು ಚಿರಾಗ್ ಪಾಸ್ವಾನ್ ಅವರು ‘‘ಬಿಹಾರವು ನನ್ನನ್ನು ಕರೆಯುತ್ತಿದೆ’’ ಎಂದು ಘೋಷಿಸುವ ಮೂಲಕ ತನ್ನ ತವರು ರಾಜ್ಯದ ರಾಜಕಾರಣದಲ್ಲಿ ತೊಡಗುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರು ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಹಾಗೂ ಅವರ ಪಕ್ಷವು ಸ್ಪರ್ಧಿಸಿದ ಎಲ್ಲಾ ಐದು ಸ್ಥಾನಗಳಲ್ಲಿ ಜಯಗಳಿಸಿತ್ತು.
ಎನ್ಡಿಎ ಮೈತ್ರಿಕೂಟವು ಬಿಹಾರದ ವಿಧಾನಸಭಾ ಚುನಾವಣೆಯನ್ನು ನಿತೀಶ್ ಕುಮಾರ್ ಅವರ ನಾಯಕತ್ವದಡಿ ಎದುರಿಸಲಿದೆ ಎಂಂದು ಬಿಜೆಪಿ ನಾಯಕ ಹಾಗೂ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧುರಿ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಸೋಮವಾರ ಚಿರಾಗ್ ಅವರು ನಿತೀಶ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅವರ ಭಾವ ಹಾಗೂ ಜಮೂಯಿ ಕ್ಷೇತ್ರದ ಸಂಸದ ಅರುಣ್ ಭಾರತಿ ಉಪಸ್ಥಿತರಿದ್ದರು.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತನಗೆ 40 ಸ್ಥಾನಗಳನ್ನು ನೀಡಬೇಕೆಂದು ಎಲ್ಜೆಪಿ(ಆರ್ವಿಪಿ) ಬೇಡಿಕೆಯಿಟ್ಟಿದೆ. ತನ್ನ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಬಿಜೆಪಿ ಹಾಗೂ ಜೆಡಿಯು ಪಕ್ಷಗಳ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಎಲ್ಜೆಪಿ (ಆರ್.ವಿ.) ಈ ತಂತ್ರಗಾರಿಕೆಯನ್ನು ನಡೆಸಿದೆ ಎನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಸೀಟು ಹಂಚಿಕೆಯ ಸಂದರ್ಭ ಮಾಜಿ ಮುಖ್ಯಮಂತ್ರಿ ಜಿತಿನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮಿ ಮೋರ್ಚಾ (ಎಚ್ಎಎಂ) ಪಕ್ಷವು ಜೆಡಿಯು ಪಾಲಿನ 122 ಸೀಟುಗಳ ಪೈಕಿ ಏಳನ್ನು ನೀಡಿತ್ತು. ಬಿಜೆಪಿಯು ತನ್ನ ಪಾಲಿನ 121 ಸ್ಥಾನಗಳ ಪೈಕಿ 11 ಸ್ಥಾನಗಳನ್ನು ವಿಕಾಸಶೀಲ ಇನ್ಸಾನ್ ಪಕ್ಷ (ವಿಐಪಿ)ಕ್ಕೆ ನೀಡಿತ್ತು.







